ADVERTISEMENT

ರೈಲಿಗೆ ಡಿಕ್ಕಿ: 11 ವಿದ್ಯಾರ್ಥಿಗಳ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 13:18 IST
Last Updated 25 ಜುಲೈ 2014, 13:18 IST

ಹೈದರಾಬಾದ್(ಪಿಟಿಐ): ನಾಂದೇಡ್-ಸಿಕಂದರಾಬಾದ್ ಪ್ರಯಾಣಿಕರ ರೈಲಿಗೆ ತೆಲಂಗಾಣದ ಮೆದಕ್ ಜಿಲ್ಲೆಯ ಮಾಸಾಯಿಪೇಟದ ಬಳಿ ಮಾನವ ರಹಿತ ಲೆವಲ್ ಕ್ರಾಸಿಂಗ್ ನಲ್ಲಿ ಗುರುವಾರ ಶಾಲಾ ವಾಹನ ಡಿಕ್ಕಿಯಾಗಿ ಸಂಭವಿಸಿದ ದುರ್ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ 11 ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಶುಕ್ರವಾರ ಗಂಭೀರವಾಗಿದೆ.

ದುರ್ಘಟನೆ ನಡೆದ ಸ್ಥಳದಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 20 ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವ ಸಿಕಂದರಾಬಾದ್ ನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ತೆಲಂಗಾಣ ಆರೋಗ್ಯ ಸಚಿವ ಟಿ. ರಾಜಯ್ಯ ಅವರು ಮಾಹಿತಿ ನೀಡಿ, ಗಾಯಗೊಂಡ ನಾಲ್ಕು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಏಳು ವಿದ್ಯಾರ್ಥಿಗಳಿಗೆ ಕೃತಕ ಉಸಿರಾಟ ನೀಡಲಾಗಿದೆ. ಉಳಿದಂತೆ 9 ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

ADVERTISEMENT

ಗುರುವಾರ ನಡೆದ ಘಟನೆಯಲ್ಲಿ ಖಾಸಗಿ ಶಾಲೆಯ ಬಸ್ ನಲ್ಲಿದ್ದ 14 ವಿದ್ಯಾರ್ಥಿಗಳು ಹಾಗೂ ಬಸ್ ಚಾಲಕ, ಕ್ಲೀನರ್ ಸೇರಿದಂತೆ 16 ಮಂದಿ ಮೃತಪಟ್ಟಿದ್ದರು. ಗಾಯಗೊಂಡಿದ್ದ 20 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜ್ಯ ರೈಲ್ವೆ ಸಚಿವ ಮೊಹಮ್ಮದ್ ಮೆಹ್ಮೂದ್ ಅಲಿ, ತೆಲಂಗಾಣ ರಾಜ್ಯ ವ್ಯಾಪ್ತಿಯಲ್ಲಿ ಮಾನವ ಕಾವಲು ರಹಿತ ರೈಲ್ವೆ ಕ್ರಾಸಿಂಗ್ ಗಳಲ್ಲಿ ಗೇಟ್ ಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ರೈಲ್ವೆ ಕೇಂದ್ರೀಯ ವಿಭಾಗಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.