ADVERTISEMENT

ರೈಲಿಗೆ ಸಿಲುಕಿ ಮಹಿಳೆ ಬಲಿ: ನೋಡುತ್ತಾ ನಿಂತ ಯುವಕರು

ರಕ್ಷಣೆಗೆ ಧಾವಿಸದೆ ಮೊಬೈಲ್‌ನಲ್ಲಿ ದೃಶ್ಯ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2015, 9:37 IST
Last Updated 10 ಏಪ್ರಿಲ್ 2015, 9:37 IST

ತಿರುವನಂತಪುರ (ಪಿಟಿಐ): ಮಹಿಳೆಯೊಬ್ಬರು ರೈಲಿಗೆ ಸಿಲುಕಿ ಪ್ರಾಣ ಬಿಡುವುದನ್ನು ತಪ್ಪಿಸಬಹುದಿದ್ದರೂ,   ಅವರ ರಕ್ಷಣೆಗೆ ಧಾವಿಸದೆ, ಇಬ್ಬರು ಯುವಕರು ಅವರ ಮೈಮೇಲೆ ರೈಲು ಹರಿಯುವ ಹೃದಯ ವಿದ್ರಾವಕ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಕೊಟ್ಟಾಯಂ ಸಮೀಪದ ಮುಟ್ಟಂಬಲಂ ಎಂಬಲ್ಲಿ ಶುಕ್ರವಾರ ಬೆಳಗಿನ ಜಾವ 3:30ರ ಸುಮಾರಿಗೆ ಈ ಮನಕಲಕುವ ಘಟನೆ ನಡೆದಿದೆ.

 ಲಿಲಿತಾ ತಂಗಚ್ಚನ್‌ (47)  ಎಂಬುವವರು ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದರು. ಪಕ್ಕದಲ್ಲಿದ್ದ ಇನ್ನೊಂದು ಟ್ರಾಕ್‌ನಲ್ಲಿ  ಪರಶುರಾಮ್‌ ಎಕ್ಸ್‌ಪ್ರಸ್‌ ರೈಲು ಶರವೇಗದಲ್ಲಿ ಮುನ್ನುಗ್ಗಿ ಬರುತ್ತಿತ್ತು. ಆದರೆ, ಇದರ ಪರಿವೇ ಇಲ್ಲದೆ, ಲಲಿತಾ ಹಳಿ ದಾಟುತ್ತಿದ್ದರು. ದೂರದಲ್ಲಿ  ಇಬ್ಬರು ಯುವಕರು ಇದೆಲ್ಲವನ್ನೂ ನೋಡುತ್ತಾ ಸುಮ್ಮನೆ ನಿಂತಿದ್ದರು.

ರೈಲು ಮಹಿಳೆಯ ಹತ್ತಿರ ಬರುತ್ತಿದ್ದಂತೆ ಕಿಸೆಯಿಂದ ಮೊಬೈಲ್‌ ತೆರೆದು ದೃಶ್ಯವನ್ನು ಚಿತ್ರೀಕರಿಸಿಕೊಳ್ಳತೊಡಗಿದರು. ಜೋರಾಗಿ  ಕೂಗಿ ಮಹಿಳೆಯನ್ನು ಎಚ್ಚರಿಸಿದರೂ ಅವರ ಪ್ರಾಣ ಉಳಿಯುತ್ತಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ತಮ್ಮ ಕಣ್ಣೆದುರಿಗೇ ಪ್ರಾಣ ಪಕ್ಷಿ ಹಾರಿ ಹೋಗುವುದನ್ನು ನೋಡುತ್ತಾ ನಿಂತರು.

ಘಟನೆ ನಡೆದಾಗ ರೈಲು ಕಾವಲುಗಾರ ತಮ್ಮ ಕೊಠಡಿಯಲ್ಲಿದ್ದರು.ಕೊನೆಯ ಕ್ಷಣದಲ್ಲಿ ಅವರು ಮಹಿಳೆಯನ್ನು ಗಮನಿಸಿದರು. ಕೂಡಲೇ, ಕೆಂಪು ದ್ವಜ ಹಿಡಿದು ಓಡುತ್ತಾ ರೈಲು ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ರೈಲು ಮಹಿಳೆಯ ಮೈಮೇಲೆ ಹರಿದು ಅವರ ಪ್ರಾಣ ಬಲಿ ಪಡೆದಿತ್ತು. ಆ ಇಬ್ಬರು ಯುವಕರು ಪ್ರಯತ್ನಿಸಿದ್ದರೆ  ಮಹಿಳೆಯ ಜೀವ ಉಳಿಸಬಹುದಿತ್ತು ಎಂದು ಕಾವಲುಗಾರ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. 

ಕೊಯಿಕ್ಕೋಡ್‌ನಲ್ಲಿ ಗುರುವಾರ ನಡೆದ ಇನ್ನೊಂದು ಘಟನೆಯಲ್ಲಿ ರೈಲಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಹೋಗಿ, 64  ವರ್ಷದ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ನಡೆದಿದೆ. 

ಕಿವುಡರಾದ 70 ವರ್ಷದ ರಾಮನ್‌   ರೈಲು ಹಳಿ ದಾಟುತ್ತಿದ್ದರು. ಎದುರಿಗೆ ರೈಲು ಮುನ್ನುಗ್ಗಿ ಬರುತ್ತಿತ್ತು. ಎಷ್ಟು ಕೂಗಿದರೂ ರಾಮನ್‌ಗೆ ಕೇಳಿಸಲಿಲ್ಲ. ಕೂಡಲೇ ಅವರನ್ನು ರಕ್ಷಿಸಲು ಅಬ್ದುಲ್‌ ರಹೀಂ ಧಾವಿಸಿದರು. ಟ್ರಾಕ್‌ನಿಂದ ಅವರನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಿದರು. ಆದರೆ, ರೈಲು ಇಬ್ಬರಿಗೂ ಡಿಕ್ಕಿ ಹೊಡೆಯಿತು. ಸ್ಥಳದಲ್ಲೇ ಇಬ್ಬರೂ  ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.