ADVERTISEMENT

ವಾಟ್ಸ್‌ಆ್ಯಪ್‌ ಮೂಲಕ ತಲಾಕ್‌ ನೀಡಿದ್ದ ಪತಿ: ನೊಂದ ಮಹಿಳೆಯಿಂದ ದೂರು

ಏಜೆನ್ಸೀಸ್
Published 24 ಏಪ್ರಿಲ್ 2017, 11:10 IST
Last Updated 24 ಏಪ್ರಿಲ್ 2017, 11:10 IST
ವಾಟ್ಸ್‌ಆ್ಯಪ್‌ ಮೂಲಕ ತಲಾಕ್‌ ನೀಡಿದ್ದ ಪತಿ: ನೊಂದ ಮಹಿಳೆಯಿಂದ ದೂರು
ವಾಟ್ಸ್‌ಆ್ಯಪ್‌ ಮೂಲಕ ತಲಾಕ್‌ ನೀಡಿದ್ದ ಪತಿ: ನೊಂದ ಮಹಿಳೆಯಿಂದ ದೂರು   

ಹೈದರಾಬಾದ್‌: ತ್ರಿವಳಿ ತಲಾಕ್‌ ಬಗ್ಗೆ ದೇಶದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಸ್ಲಿಂ ಪುರುಷರು ಬಗೆಬಗೆಯ ರೀತಿಯಲ್ಲಿ ತಲಾಕ್‌ ನೀಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

ದುಬೈನಲ್ಲಿರುವ ಪತಿ ಹೈದರಾಬಾದ್‌ನಲ್ಲಿರುವ ಪತ್ನಿಗೆ ವಾಟ್ಸ್‌ಆ್ಯಪ್‌ ಮೂಲಕ ತ್ರಿವಳಿ ತಲಾಕ್‌ ನೀಡಿರುವ ವಿಷಯ ಇದೀಗ ಬಹಿರಂಗಗೊಂಡಿದೆ.

ಅಲ್ಲದೆ ಅತ್ತೆಯ ಮನೆಯವರು ಪರ ಪುರುಷನೊಂದಿಗೆ ಮಲಗುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದರು ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.

ADVERTISEMENT

ಓವೈಸ್‌ ತಾಲಿಬ್‌ ಮತ್ತು ಸುಮೈನಾ ಶರ್ಫಿ 2015ರಲ್ಲಿ ವಿವಾಹವಾಗಿದ್ದರು. ವಿವಾಹವಾದ ಬಳಿಕ ದುಬೈಗೆ ಹೋಗಿದ್ದ ದಂಪತಿ ಬಳಿಕ ಹೈದರಾಬಾದ್‌ಗೆ ಹಿಂದಿರುಗಿದ್ದರು. ಕೆಲ ದಿನಗಳ ನಂತರ ಪತ್ನಿಯನ್ನು ಹೈದರಾಬಾದ್‌ನಲ್ಲೇ ಬಿಟ್ಟು ತಾಲಿಬ್‌ ತಾನೊಬ್ಬನೇ ದುಬೈಗೆ ತೆರಳಿದ್ದ.

‘ತನ್ನ ಎರಡನೇ ಪತಿಯೊಂದಿಗೆ ಮಲಗುವಂತೆ ಅತ್ತೆ ಒತ್ತಾಯಿಸುತ್ತಿದ್ದರು. ಈ ವಿಷಯ ಗೊತ್ತಿದ್ದರೂ ನನ್ನ ಪತಿ ಸುಮ್ಮನಿದ್ದರು. ಅತ್ತೆಯ ಮಾತಿಗೆ ನಾನು ಒಪ್ಪದಿದ್ದಾಗ ಕಿರುಕುಳ ನೀಡಲು ಆರಂಭಿಸಿದರು. ಮನೆಯಲ್ಲಿ ನಿತ್ಯವೂ ನನ್ನನ್ನು ಹಿಂಸಿಸುತ್ತಿದ್ದರು. ಊಟವನ್ನೂ ಕೊಡದೆ ಕೋಣೆಯಲ್ಲಿ ಕೂಡಿಹಾಕುತ್ತಿದ್ದರು’ ಎಂದು ಸುಮೈನಾ ದೂರಿದ್ದಾರೆ.

‘ಅತ್ತೆ ನನ್ನ ಮೇಲೆ ವಾಮಾಚಾರ ಪ್ರಯೋಗವನ್ನೂ ಮಾಡುತ್ತಿದ್ದರು. ನನಗೆ ಕಿರುಕುಳ ನೀಡುತ್ತಿರುವ ವಿಷಯ ತಿಳಿದ ಅಪ್ಪ ನನ್ನನ್ನು ತವರು ಮನೆಗೆ ಕರೆದುಕೊಂಡು ಹೋದರು. ಈ ಮಧ್ಯೆ ಕಳೆದ ವರ್ಷ ನವೆಂಬರ್‌ 28ರಂದು ನನ್ನ ಹುಟ್ಟುಹಬ್ಬದಂದು ಪತಿ ವಾಟ್ಸ್‌ಆ್ಯಪ್‌ ಮೂಲಕ ತಲಾಕ್‌ ಸಂದೇಶ ಕಳಿಸಿದ್ದರು’ ಎಂದು ಸುಮೈನಾ ಹೇಳಿದ್ದಾರೆ.

ಓವೈಸ್‌ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಸುಮೈನಾ ಸನತ್‌ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.