ADVERTISEMENT

ವಾಮಾಚಾರ ಶಂಕೆ: ಮಹಿಳೆಗೆ ಏಟು, ನಗ್ನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 9:29 IST
Last Updated 28 ಜುಲೈ 2014, 9:29 IST

ಭುವನೇಶ್ವರ (ಐಎಎನ್ಎಸ್): ವಾಮಾಚಾರ ನಡೆಸುತ್ತಿದ್ದಾಳೆ ಎಂಬ ಗುಮಾನಿಯಲ್ಲಿ 60 ವರ್ಷದ ಗುಡ್ಡಗಾಡು ಮಹಿಳೆಯೊಬ್ಬಳನ್ನು ಥಳಿಸಿ ಗ್ರಾಮದಲ್ಲಿ ನಗ್ನ ಪ್ರದರ್ಶನ ಮಾಡಿದ ಅಮಾನುಷ ಘಟನೆಯೊಂದು ಒಡಿಶಾದ ಮಯೂರಭಂಜ್ ಜಿಲ್ಲೆಯ ಜೋದಪೊಖಾರಿ ಗ್ರಾಮದಲ್ಲಿ ಘಟಿಸಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭುವನೇಶ್ವರಕ್ಕೆ 300 ಕಿ.ಮೀ. ದೂರದ ಜೋದಪೊಖಾರಿ ಗ್ರಾಮದಲ್ಲಿ ಭಾನುವಾರ ಘಟನೆ ಘಟಿಸಿದ್ದು, ನಗ್ನ ಸ್ಥಿತಿಯಲ್ಲಿ ಕಂಬವೊಂದಕ್ಕೆ ಕಟ್ಟಿಹಾಕಲಾಗಿದ್ದ ಆಕೆಯನ್ನು 12 ಗಂಟೆಗಳ ಬಳಿಕ ಪೊಲೀಸರು ರಕ್ಷಿಸಿದ ಮೇಲಷ್ಟೇ  ಪ್ರಕರಣ ಬೆಳಕಿಗೆ ಬಂದಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಿ. ಮಲ್ಲಿಕ್ ಅವರು ತಿಳಿಸಿರುವ ಪ್ರಕಾರ ಪ್ರಕರಣದ ವಿವರ ಹೀಗಿದೆ:

ಜೋದಪೊಖಾರಿ ಗ್ರಾಮದ 18 ವರ್ಷದ ಯುವಕನೊಬ್ಬ ಜುಲೈ 23ರಂದು ಮಲೇರಿಯಾದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತನಾಗಿದ್ದ. ಈತನ ಸಾವಿಗೆ ವಾಮಾಚಾರ ಕಾರಣ ಎಂದು ಶಂಕಿಸಿದ ಯುವಕನ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಲು ನಿರಾಕರಿಸಿದರು.

ಇತರ ಗ್ರಾಮಸ್ಥರ ಜೊತೆ ಸೇರಿಕೊಂಡು ಕುಟುಂಬ ಸದಸ್ಯರು ಗ್ರಾಮದಲ್ಲಿ ವಾಮಾಚಾರ ನಡೆಸುತ್ತಿದ್ದಾರೆಂದು ಶಂಕಿಸಿದ ಮೂವರು ಮಹಿಳೆಯರನ್ನು ಕರೆದು ಯುವಕನಿಗೆ ಪುನಃ ಪ್ರಾಣ ಬರುವಂತೆ ಮಾಡಲು ಸೂಚಿಸಿದರು.

ಯುವಕನನ್ನು ಪುನರ್ಜೀವಗೊಳಿಸುವ ವಿಧಿಗಳು ನಡೆಯುತ್ತಿದ್ದಾಗ ಒಬ್ಬ ಮಹಿಳೆ ಜಾಗ ಬಿಟ್ಟು ತೆರಳಿದಳು. ಗ್ರಾಮಸ್ಥರು ಆಕೆಯನ್ನು ಬೆನ್ನತ್ತಿಕೊಂಡು ಹೋಗಿ ಹಿಂದಕ್ಕೆ ಕರೆತಂದರು. 18 ವರ್ಷದ ಯುವಕನನ್ನು  ಆಕೆಯೇ ಕೊಂದಿರುವುದಾಗಿ ಆಪಾದಿಸಿದ ಅವರು ಆಕೆಯನ್ನು ಥಳಿಸಿ, ನಗ್ನಗೊಳಿಸಿ ಕಂಬವೊಂದಕ್ಕೆ ಅದೇ ಸ್ಥಿತಿಯಲ್ಲಿ ಕಟ್ಟಿಹಾಕಿ ಬಹಿರಂಗ ಪ್ರದರ್ಶನಕ್ಕೆ ಇಟ್ಟರು.

ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದರು ಎಂದು ಮಲ್ಲಿಕ್ ತಿಳಿಸಿದರು.

'32 ವರ್ಷಗಳ ನನ್ನ ಪೊಲೀಸ್ ವೃತ್ತಿ ಜೀವನದಲ್ಲಿ ವಾಮಾಚಾರಕ್ಕೆ ಸಂಬಂಧಿಸಿದಂತೆ ಇಂತಹ ಬರ್ಬರ ಕೃತ್ಯವನ್ನು ನಾನು ಎಂದೂ ಕಂಡಿರಲಿಲ್ಲ' ಎಂದೂ ಮಲ್ಲಿಕ್ ನುಡಿದರು.

ಯುವಕನ ಶವದ ಅಂತ್ಯಕ್ರಿಯೆ ನೆರವೇರಿಸಲು ಗ್ರಾಮಸ್ಥರು ನಿರಾಕರಿಸಿದ ಬಳಿಕ ಪ್ರಕ್ಷುಬ್ಧ ಸ್ಥಿತಿ ಉಂಟಾದುದನ್ನು ಅನುಸರಿಸಿ 100ಕ್ಕೂ ಹೆಚ್ಚು ಸಶಸ್ತ್ರ ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.