ADVERTISEMENT

ವೈದ್ಯಕೀಯ ನಿರ್ಲಕ್ಷ್ಯ: 20 ವರ್ಷ ನಂತರ ಆರೋಪದಿಂದ ಮುಕ್ತಿ

ಪಿಟಿಐ
Published 9 ಏಪ್ರಿಲ್ 2017, 20:10 IST
Last Updated 9 ಏಪ್ರಿಲ್ 2017, 20:10 IST
ನವದೆಹಲಿ: ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಕ್ಕೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದ ಶಸ್ತ್ರಚಿಕಿತ್ಸೆ ತಜ್ಞೆಯು ಕೊನೆಗೂ ಪ್ರಕರಣದಿಂದ ಮುಕ್ತಿ ದೊರಕಿ ನಿರಾಳರಾಗಿದ್ದಾರೆ.
 
ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ಸತ್ತಿದ್ದರಿಂದ ವೈದ್ಯೆಯ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
 
ವೈದ್ಯರಂತಹ ವೃತ್ತಿಪರರ ವಿರುದ್ಧ ನಿರ್ಲಕ್ಷ್ಯದ ದೂರು ಬಂದಾಗ ಅವರ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಈ ಪ್ರಕರಣ ವಿಲೇವಾರಿ ಮಾಡುವಾಗ ನ್ಯಾಯಮೂರ್ತಿಗಳಾದ ಎಂ. ಬಿ. ಲೋಕೂರ್ ಮತ್ತು ದೀಪಕ್ ಮಿಶ್ರಾ ಅವರಿದ್ದ ಪೀಠವು ಉಲ್ಲೇಖಿಸಿದೆ.
 
ವೈದ್ಯೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ನೀಡಿದ್ದ ಅನುಮತಿಯನ್ನು  ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈ ಮೂಲಕ 20 ವರ್ಷಗಳ ನಂತರ ವೈದ್ಯೆ ಪ್ರಕರಣದಿಂದ ಮುಕ್ತಿ ಪಡೆದಿದ್ದಾರೆ.
 
ಪ್ರಕರಣದ ವಿವರ: ಅಪಘಾತದ ನಂತರ ಅಮರಾವತಿಯ ಇರ್ವಿನ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರಿಂದ ಆತ ಮೃತಪಟ್ಟಿದ್ದ.  ಆ ವ್ಯಕ್ತಿಯ ಸಹೋದರ ಆಸ್ಪತ್ರೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
 
ಆಸ್ಪತ್ರೆಯ ಸಂದರ್ಶಕ ಶಸ್ತ್ರಚಿಕಿತ್ಸೆ ತಜ್ಞೆಯು ರೋಗಿಯನ್ನು ಪರಿಶೀಲಿಸಿ ಆಸ್ಪತ್ರೆಯ ಬೇರೊಬ್ಬ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಆದರೆ ಆ ವೈದ್ಯರು ಬಹಳ ಹೊತ್ತಿನ ನಂತರವೂ ಬಾರದ ಕಾರಣ ತಜ್ಞ ವೈದ್ಯೆ ಆಸ್ಪತ್ರೆಯಿಂದ ತೆರಳಿದ್ದರು.
 
ತಾವು ಶಿಫಾರಸು ಮಾಡಿದ ವೈದ್ಯರು ಚಿಕಿತ್ಸೆ ನೀಡುತ್ತಾರೆ ಎಂಬ ಭರವಸೆಯಿಂದ ಶಸ್ತ್ರಚಿಕಿತ್ಸೆ ತಜ್ಞೆಯು ಮನೆಗೆ ಹೋಗಿರುವುದು ವೈದ್ಯಕೀಯ ನಿರ್ಲಕ್ಷ್ಯ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.