ADVERTISEMENT

ಶಂಕಿತ ಐಎಂ ಸದಸ್ಯನ ಅರ್ಜಿ ವಿಚಾರಣೆಗೆ ಒಪ್ಪಿಗೆ

ಪಿಟಿಐ
Published 21 ಮೇ 2018, 19:15 IST
Last Updated 21 ಮೇ 2018, 19:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2012ರಲ್ಲಿ ಸೌದಿ ಅರೇಬಿಯಾದಿಂದ ಗಡೀಪಾರಾಗಿರುವ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಶಂಕಿತ ಸದಸ್ಯ ಫಾಸಿಹ್ ಮಹಮೂದ್ ಸಲ್ಲಿಸಿರುವ ಅರ್ಜಿಯನ್ನು ಮೇ 23ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಸ್ಥಾಪಿಸಿರುವ ಆರೋಪದಲ್ಲಿ ಫಾಸಿಹ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ನವೀನ್ ಸಿನ್ಹಾ ಅವರಿದ್ದ ಪೀಠ, ಅರ್ಜಿಯ ಪ್ರತಿಯನ್ನು ಸಂಬಂಧಿಸಿದ ರಾಜ್ಯದ ವಕೀಲರಿಗೆ ನೀಡುವಂತೆ ಆರೋಪಿ ಪರ ವಕೀಲರಿಗೆ ಸೋಮವಾರ ಸೂಚಿಸಿತು.

ADVERTISEMENT

ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ 70 ಸಾಕ್ಷಿಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇಂಡಿಯನ್ ಮುಜಾಹಿದೀನ್‌ನ ಸಹ ಸ್ಥಾಪಕ ಯಾಸಿನ್ ಭಟ್ಕಳ್ ಆಪ್ತ ವಲಯದಲ್ಲಿರುವ ಫಾಸಿಹ್‌ಗೆ ಜಾಮೀನು ನೀಡಲು ಯಾವುದೇ ಸಕಾರಣ ಇಲ್ಲ ಎಂದು ಏಪ್ರಿಲ್ 17ರಂದು ಹೈಕೋರ್ಟ್ ತಿಳಿಸಿತ್ತು. ಅಲ್ಲದೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಕೂಡಾ ಜಾಮೀನು ನೀಡಲು ಈ ಮೊದಲು ನಿರಾಕರಿಸಿದ್ದವು ಎಂದೂ ಹೇಳಿತ್ತು.

ಆರೋಪ ಏನು?: ದೆಹಲಿಯ ಮೀರ್ ವಿಹಾರ್ ಪ್ರದೇಶದ ಶಸ್ತ್ರಾಸ್ತ್ರ ತಯಾರಿಕಾ ಘಟಕದಲ್ಲಿ ಅಪಾರ ಪ್ರಮಾಣದ ಯುದ್ಧೋಪಕರಣ, ಸ್ಫೋಟಕಗಳನ್ನು ದೆಹಲಿ ಪೊಲೀಸರ ವಿಶೇಷ ಘಟಕ ಪತ್ತೆ ಮಾಡಿತ್ತು. ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಟ್ಕಳ್, ಫಾಸಿಹ್ ಸೇರಿದಂತೆ ಉಗ್ರ ಸಂಘಟನೆಯ ಸದಸ್ಯರು ಸಂಚು ಹೂಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಎಲ್ಲ ಆರೋಪಗಳನ್ನು ಆರೋಪಿಯು ನಿರಾಕರಿಸಿದ್ದ.

ಫಾಸಿಹ್ ಯಾರು?: ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂನಿಜಿಯರ್ ಆಗಿರುವ ಈತ, ಐಎಂನ ಸಕ್ರಿಯ ಕಾರ್ಯಕರ್ತ ಎಂಬ ಆರೋಪವಿದೆ. ಸಂಘಟನೆ ಸೇರುವಂತೆ ಯುವಕರಿಗೆ ಪ್ರೇರಣೆ ನೀಡುತ್ತಿದ್ದಾನೆ ಎಂದು ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 22 ಅಕ್ಟೋಬರ್ 2012ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಈತನನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.