ADVERTISEMENT

ಶವ ಮುರಿದ ಘಟನೆ: ಎಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST

ಭುವನೇಶ್ವರ (ಪಿಟಿಐ): ವೃದ್ಧೆಯ ಮೃತದೇಹದ ಸೊಂಟ ಮುರಿದು, ಅದನ್ನು ಮಡಚಿ ಬಿದಿರು ಗಳಕ್ಕೆ ಕಟ್ಟಿ ಕೊಂಡೊಯ್ದ ಘಟನೆಗೆ ಸಂಬಂಧಿಸಿದಂತೆ ಒಡಿಶಾದ ಬಾಲಸೋರ್‌ ಜಿಲ್ಲೆಯ ಸಹಾಯಕ ಎಸ್‌ಐ (ರೈಲ್ವೆ ಪೊಲೀಸ್‌) ಪಿ.ಆರ್. ಮಿಶ್ರಾ ಅವರನ್ನು ಅಮಾನತು ಮಾಡಲಾಗಿದೆ.

‘ವೃದ್ಧೆಯ ಪಾರ್ಥಿವ ಶರೀರವನ್ನು ಸಾಗಿಸುವಾಗ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಕಾರಣಕ್ಕೆ ಮಿಶ್ರಾ ಅವರನ್ನು ಅಮಾನತು ಮಾಡಲಾಗಿದೆ. ಪ್ರಾಥಮಿಕ ವಿಚಾರಣೆಯ ನಂತರವೇ ಅಮಾನತು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಒಡಿಶಾ ರೈಲ್ವೆ ಪೊಲೀಸ್‌ ಎಸ್‌ಪಿ ಸಂಜಯ್ ಕೌಸಲ್ ತಿಳಿಸಿದರು.

ಬಾಲಸೋರ್‌ ಜಿಲ್ಲೆಯ ಸೋರೊ ಪಟ್ಟಣದ ರೈಲು ನಿಲ್ದಾಣಕ್ಕೆ ವೃದ್ಧೆಯೊಬ್ಬಳ ಮೃತದೇಹ ಸಾಗಿಸಲು ಇಬ್ಬರು ಸ್ವಚ್ಛತಾ ಕಾರ್ಮಿಕರ ಸಹಾಯ ಪಡೆಯಲಾಗಿತ್ತು. ಮೃತದೇಹ ಸೆಟೆದುಕೊಂಡಿದ್ದ ಕಾರಣ, ದೇಹದ ಮೇಲೆ ನಿಂತು ಅದರ ಸೊಂಟ ಮುರಿದು, ಮಡಚಿ, ಬಿದಿರು ಗಳಕ್ಕೆ ಕಟ್ಟಿ ಸಾಗಿಸಿದ್ದರು ಎನ್ನಲಾಗಿದೆ.

‘ಸಹಾಯಕ ಎಸ್‌ಐ ಮಿಶ್ರಾ ಅವರು ಆಗ ಆ ಸ್ಥಳದಲ್ಲೇ ಇದ್ದರು. ಆದರೆ ಅವರು ಇಂಥ ಕೃತ್ಯ ಎಸಗದಂತೆ ಕಾರ್ಮಿಕರನ್ನು ತಡೆಯಲಿಲ್ಲ’ ಎಂದು ಕೌಸಲ್ ತಿಳಿಸಿದರು.ಸಾಲಮಣಿ ಎಂಬ 80 ವರ್ಷ ವಯಸ್ಸಿನ ವೃದ್ಧೆ ಸೋರೊ ಪಟ್ಟಣದಲ್ಲಿ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಮೃತದೇಹವನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಇದಾದ 12 ಗಂಟೆಗಳ ನಂತರ ರೈಲ್ವೆ ಪೊಲೀಸರು ಆ ಸ್ಥಳ ತಲುಪಿದರು.

ದೇಹವನ್ನು ಮರಣೋತ್ತರ ಪರೀಕ್ಷೆಗೆ ಬಾಲಸೋರ್‌ಗೆ ಕೊಂಡೊಯ್ಯಲು ಆಂಬುಲೆನ್ಸ್‌ ಸಿಗದ ಕಾರಣ, ಅದನ್ನು ಬಿದಿರು ಗಳಕ್ಕೆ ಕಟ್ಟಿಕೊಂಡು ಸಾಗಿಸಲಾಯಿತು ಎಂದು ಒಡಿಶಾ ಮಾನವ ಹಕ್ಕುಗಳ ಆಯೋಗದ ವರದಿ ಹೇಳಿದೆ. ಈ ಘಟನೆ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಒಡಿಶಾ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.