ADVERTISEMENT

ಶಶಿಕಲಾ ಆಧಿಪತ್ಯ ಅಂತ್ಯ?

ಪಿಟಿಐ
Published 18 ಸೆಪ್ಟೆಂಬರ್ 2017, 11:40 IST
Last Updated 18 ಸೆಪ್ಟೆಂಬರ್ 2017, 11:40 IST
ಶಶಿಕಲಾ ಆಧಿಪತ್ಯ ಅಂತ್ಯ?
ಶಶಿಕಲಾ ಆಧಿಪತ್ಯ ಅಂತ್ಯ?   

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ವಿ.ಕೆ. ಶಶಿಕಲಾ ಅವರನ್ನು ಈ ಹುದ್ದೆಯಿಂದ ವಜಾ ಮಾಡಲಾಗಿದೆ. ಅವರು ಈವರೆಗೆ ಮಾಡಿರುವ ಎಲ್ಲ ನೇಮಕಾತಿಗಳು ಮತ್ತು ವಜಾಗಳು ಅಸಿಂಧು ಎಂದು ಪಕ್ಷದ ಸಾಮಾನ್ಯ ಪರಿಷತ್‌ ಸಭೆ ನಿರ್ಧಾರ ಕೈಗೊಂಡಿದೆ. ಹೀಗಾಗಿ ತಮ್ಮ ಸೋದರಳಿಯ ಟಿ.ಟಿ.ವಿ. ದಿನಕರನ್‌ ಅವರನ್ನು ಪಕ್ಷದ ಉಪಪ್ರಧಾನ ಕಾರ್ಯದರ್ಶಿಯಾಗಿ ಮಾಡಿದ್ದ ನೇಮಕವೂ ರದ್ದಾಗಿದೆ.

ಇದಲ್ಲದೆ, ಪಕ್ಷದ ಸರ್ವೋಚ್ಚ ಹುದ್ದೆಯಾಗಿರುವ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ರದ್ದು ಮಾಡಲಾಗಿದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರೇ ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂಬ ನಿರ್ಣಯಕ್ಕೆ ಸಾಮಾನ್ಯ ಪರಿಷತ್‌ ಬಂದಿದೆ.

ಪಕ್ಷದ ಮುಖ್ಯಸ್ಥೆಯಾಗಿದ್ದ ಜಯಲಲಿತಾ ಅವರು ಕಳೆದ ವರ್ಷ ಡಿಸೆಂಬರ್‌ 5ರಂದು ಮೃತಪಟ್ಟ ಬಳಿಕ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರನ್ನು ನೇಮಿಸಲಾಗಿತ್ತು. ಆದರೆ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ಶಶಿಕಲಾ ಅವರು ತಪ್ಪಿತಸ್ಥೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ಅವರು ಫೆಬ್ರುವರಿ 15ರಂದು ಶರಣಾಗಿದ್ದರು. ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ADVERTISEMENT

ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಸಂಯೋಜಕರಾಗಿ ಮತ್ತು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಜಂಟಿ ಸಂಯೋಜಕರಾಗಿ ನೇಮಕವಾಗಿದ್ದಾರೆ. ಈ ಹುದ್ದೆಗಳಿಗೆ ಪಕ್ಷದಲ್ಲಿ ಚುನಾವಣೆ ನಡೆಯುವವರೆಗೆ ಇವರು ಈ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ ಎಂದು ಎಐಎಡಿಎಂಕೆ ಹೇಳಿದೆ.

ಶಶಿಕಲಾ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾ ಮಾಡಲಾಗುವುದು ಎಂದು ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನೇತೃತ್ವದ ಬಣಗಳು ಆಗಸ್ಟ್‌ 21ರಂದು ವಿಲೀನವಾಗುವಾಗಲೇ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದರು. ಇದು ವಿಲೀನಕ್ಕೆ ಪಳನಿಸ್ವಾಮಿ ಬಣ ಮುಂದಿಟ್ಟ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಈ ನಿಟ್ಟಿನಲ್ಲಿ ಪಕ್ಷ ಮುಂದುವರಿಯುತ್ತಿದೆ ಎಂಬ ಕಾರಣಕ್ಕೆ ಪಕ್ಷದ 19 ಶಾಸಕರು ಬಂಡಾಯ ಎದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.