ADVERTISEMENT

ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 10:20 IST
Last Updated 22 ಡಿಸೆಂಬರ್ 2014, 10:20 IST

ನವದೆಹಲಿ (ಪಿಟಿಐ): ಸಂಸತ್ತಿನ ಉಭಯ ಸದನಗಳಲ್ಲೂ ವಿರೋಧಪಕ್ಷಗಳು ಒಗ್ಗಟ್ಟಿನಿಂದ ಸರ್ಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿವೆ.

ಕಪ್ಪುಹಣ ವಾಪಸ್‌ ತರುವ ಹಾಗೂ ಉದ್ಯೋಗ ಸೃಷ್ಟಿಯಂತಹ ಭರವಸೆ ಈಡೇರಿಸುವುದನ್ನು ಬಿಟ್ಟು ಧಾರ್ಮಿಕ ಮತಾಂತರದಂಥ ವಿವಾದಗಳಿಗೆ ಸರ್ಕಾರವು ಒತ್ತು ನೀಡುತ್ತಿದೆ ಎಂದು ಆರೋಪಿಸಿವೆ.

ಮತಾಂತರಕ್ಕೆ ಅವಕಾಶ ನೀಡುತ್ತಿರುವ ಸರ್ಕಾರ, ಚುನಾವಣಾ ಸಮಯದಲ್ಲಿ ನೀಡಿರುವಂಥ ಕಪ್ಪುಹಣ ವಾಪಸ್ ಹಾಗೂ ಉದ್ಯೋಗಾವಕಾಶ ಸೃಷ್ಟಿಗಳಂಥ ಭರವಸೆಗಳ ಈಡೇರಿಕೆ ಬಗ್ಗೆ ಮೌನವಹಿಸಿದೆ ಎಂದು ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಲ್ಲಿ ಕೋಲಾಹಲ ಸೃಷ್ಟಿಸಿದವು.

ADVERTISEMENT

ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಭಿತ್ತಿ ಚಿತ್ರಗಳೊಂದಿಗೆ ಸಮಾಜವಾದಿ, ಜೆಡಿಯು ಹಾಗೂ ಟಿಎಂಸಿ ಸದಸ್ಯರು ಸಭಾಪತಿಗಳ ಎದುರು ಧರಣಿ ನಡೆಸಿದರು. ಪರಿಣಾಮವಾಗಿ ಶೂನ್ಯವೇಳೆಯಲ್ಲಿ  ಒಂದು  ಬಾರಿ ಹಾಗೂ ಪ್ರಶ್ನಾವಳಿ ಸಮಯದಲ್ಲಿ ಎರಡು ಬಾರಿ ಸೇರಿದಂತೆ ಊಟದ ವಿರಾಮಕ್ಕೂ ಮುನ್ನವೇ ರಾಜ್ಯಸಭೆಯ  ಕಲಾಪ ಮೂರು ಬಾರಿ ಮುಂದೂಡಲಾಯಿತು.

ಇತ್ತ ಲೋಕಸಭೆಯಲ್ಲಿ ಜನತೆಗೆ ನೀಡಿರುವ ಆಸ್ವಾಸನೆಗಳನ್ನು ಈಡೇರಿಸದಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಅವರು ಟೀಕಿಸಿದರು. ಬಳಿಕ ಸಮಾಜವಾದಿ, ಆರ್‌ಜೆಡಿ ಹಾಗೂ ಜೆಡಿಯು ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ಭಿತ್ತಿ ಪತ್ರಗಳೊಂದಿಗೆ ಸದಸ್ಯರು ಗದ್ದಲ ಮಾಡುತ್ತಿದ್ದಂತೆಯೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮುಲಾಯಂ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.