ADVERTISEMENT

ಸಿಂಗ್‌ ಬಗ್ಗೆ ಮೋದಿ ಲೇವಡಿ, ಕಾಂಗ್ರೆಸ್ ಕೆಂಡ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 20:35 IST
Last Updated 8 ಫೆಬ್ರುವರಿ 2017, 20:35 IST
ಸಿಂಗ್‌ ಬಗ್ಗೆ ಮೋದಿ ಲೇವಡಿ, ಕಾಂಗ್ರೆಸ್ ಕೆಂಡ
ಸಿಂಗ್‌ ಬಗ್ಗೆ ಮೋದಿ ಲೇವಡಿ, ಕಾಂಗ್ರೆಸ್ ಕೆಂಡ   
ನವದೆಹಲಿ: ನೋಟು ರದ್ದತಿ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಗುರಿಯಾಗಿಸಿ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ರೈನ್‌ಕೋಟ್‌ ಧರಿಸಿ ಸ್ನಾನ ಮಾಡುವುದನ್ನು ಡಾಕ್ಟರ್‌ ಸಾಹೇಬರಿಂದ ಕಲಿಯಬೇಕು’ ಎಂದು ಹೇಳಿದರು.
 
ರಾಷ್ಟ್ರಪತಿಯರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮೇಲ್ಮನೆ ಅನುಮೋದನೆ ನೀಡಿತು. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಸದನದಲ್ಲಿ ನಡೆದ ಚರ್ಚೆಗೆ ಉತ್ತರಿಸಿದರು.
 
ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ನೋಟು ರದ್ದತಿ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಡಾ. ಸಿಂಗ್, ‘ಇದು ಸಂಘಟಿತ ಲೂಟಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
 
‘ಡಾ. ಸಿಂಗ್ ಅವರು ವಿಶ್ವದ ದೊಡ್ಡ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ದೇಶದ ಅರ್ಥವ್ಯವಸ್ಥೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಡಾ. ಸಿಂಗ್ 30–35 ವರ್ಷಗಳ ಕಾಲ ಮಹತ್ವದ ಪಾತ್ರ ವಹಿಸಿದ್ದಾರೆ’ ಎಂದು ಮೋದಿ ಹೇಳಿದರು.
 
‘ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟೆಲ್ಲ ಹಗರಣಗಳು ನಡೆದವು. ನಾವು ಡಾಕ್ಟರ್‌ ಸಾಹೇಬರಿಂದ (ಸಿಂಗ್‌) ಕಲಿತುಕೊಳ್ಳುವುದು ಬಹಳಷ್ಟಿದೆ. ಏನೆಲ್ಲ ಆದರೂ, ಮನಮೋಹನ್‌ ಸಿಂಗ್‌ ಮೇಲೆ ಒಂದೂ ಕಪ್ಪುಚುಕ್ಕೆ ಇಲ್ಲ. ರೈನ್‌ಕೋಟ್‌ ಧರಿಸಿ ಸ್ನಾನ ಮಾಡುವುದು ಹೇಗೆಂಬುದು ಅವರಿಗೆ ಮಾತ್ರ ಗೊತ್ತು’ ಎಂದು ಮೋದಿ ಅವರು ಮಾತಿನಿಂದ ತಿವಿದರು.
 
ಮೋದಿ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.
 
‘ನೀವು (ಕಾಂಗ್ರೆಸ್ಸಿಗರು) ಶಿಷ್ಟಾಚಾರದ ಎಲ್ಲೆ ಮೀರಿದಾಗ, ಎದುರಿನ ವ್ಯಕ್ತಿ ನೀಡುವ ಉತ್ತರ ಕೇಳಿಸಿಕೊಳ್ಳುವ ಧೈರ್ಯ ತೋರಿಸಬೇಕು. ನೀವು ಬಳಸಿದ ಭಾಷೆಯಲ್ಲೇ ಉತ್ತರಿಸುವ ಸಾಮರ್ಥ್ಯ ನಮಗಿದೆ. ನಾವು ಆ ಕೆಲಸವನ್ನು ಸಂವಿಧಾನದ ಮಿತಿಯೊಳಗೆ, ಶಿಷ್ಟಾಚಾರ ಮೀರದೆ ಮಾಡುತ್ತೇವೆ. ಸೋಲನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ಸಿಗರು ಸಿದ್ಧರಿಲ್ಲ. ಇದೆಲ್ಲ ಎಷ್ಟು ದಿನ ನಡೆಯುತ್ತದೆ? ದೊಡ್ಡ ಸ್ಥಾನ ನಿಭಾಯಿಸಿದ ವ್ಯಕ್ತಿ ಲೂಟಿ, ದರೋಡೆ ಎಂಬ ಪದಗಳನ್ನು ಸದನದಲ್ಲಿ ಬಳಸಿದರು. ಹಾಗೆ ಮಾಡುವ ಮುನ್ನ ಐವತ್ತು ಬಾರಿ ಆಲೋಚಿಸಬೇಕಿತ್ತು’ ಎಂದು ಕೋಪಾವಿಷ್ಟರಾಗಿದ್ದ ಪ್ರಧಾನಿ ಹೇಳಿದರು.
 
ಇದಕ್ಕೂ ಮುನ್ನ ಮಧ್ಯಪ್ರವೇಶಿಸಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ‘ಪ್ರಧಾನಿ ಮೋದಿ ಅವರನ್ನು ಹಿಟ್ಲರ್, ಮುಸ್ಸೋಲಿನಿ ಎಂದೆಲ್ಲ ಕರೆಯಲಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
**
‘ಕ್ಷಮೆಯಾಚಿಸದಿದ್ದರೆ ಕಲಾಪಕ್ಕೆ ಅಡ್ಡಿ’
ಪ್ರಧಾನಿ ಮೋದಿ ಅವರು ಮನಮೋಹನ್ ಸಿಂಗ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವುದನ್ನು ಖಂಡಿಸಿರುವ ಕಾಂಗ್ರೆಸ್, ಮೋದಿ ಕ್ಷಮೆ ಯಾಚಿಸುವವರೆಗೆ ಸಂಸತ್ ಕಲಾಪಕ್ಕೆ ಅಡ್ಡಿ ಉಂಟುಮಾಡುವ ಬೆದರಿಕೆ ಒಡ್ಡಿದೆ.
 
ಮೋದಿ ಅವರು ಕ್ಷಮೆ ಯಾಚಿಸಬೇಕೆಂದು ಪಕ್ಷವು ಆಗ್ರಹಿಸಲಿದೆ. ಇದಕ್ಕೆ ಮೋದಿ ಒಪ್ಪದಿದ್ದರೆ, ಕಲಾಪ ನಡೆಸಲು ಅವಕಾಶ ಕೊಡದಿರಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಲು ಡಾ. ಸಿಂಗ್ ನಿರಾಕರಿಸಿದರು.
 
‘ಇಷ್ಟು ಕಟುವಾದ, ಕೊಳಕು ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ನಾವು ಪ್ರತಿಭಟನೆಯ ರೂಪದಲ್ಲಿ ಸಭಾತ್ಯಾಗ ನಡೆಸಿದೆವು. ಹಿಂದಿನ ಯಾವ ಪ್ರಧಾನಿಯೂ ಮಾಜಿ ಪ್ರಧಾನಿಯೊಬ್ಬರ ಬಗ್ಗೆ ಇಂಥ ಮಾತು ಆಡಿಲ್ಲ’ ಎಂದು ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಹೇಳಿದರು.
 
**
ಸೋನಿಯಾ ಜೊತೆ ಅಡ್ವಾಣಿ ಮಾತುಕತೆ
ನವದೆಹಲಿ: ಶತ್ರು ಆಸ್ತಿ ಮಸೂದೆ ಸೇರಿದಂತೆ ಕೆಲವು ಮಸೂದೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಸರ್ಕಾರದ ಪರವಾಗಿ ಮಾತನಾಡಲು ಸಿದ್ಧವಿರುವುದಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.

ಪಾಕಿಸ್ತಾನ ಹಾಗೂ ಚೀನಾಕ್ಕೆ ಭಾರತದಿಂದ ವಲಸೆ ಹೋದವರು ಇಲ್ಲಿರುವ ಪೂರ್ವಿಕರ ಆಸ್ತಿ ಮೇಲೆ ಹಕ್ಕು ಸ್ಥಾಪಿಸದಂತೆ ತಡೆಯಲು ಶತ್ರು ಆಸ್ತಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ.

ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯುವುದು ಕಷ್ಟವಾಗಿರುವ ಕಾರಣ, ಮತ್ತೆ ಸುಗ್ರೀವಾಜ್ಞೆಯ ಮೊರೆಹೋಗಬೇಕಾಗಿದೆ ಎಂದು ಹಣಕಾಸು ಸಚಿವ ಜೇಟ್ಲಿ , ಬಿಜೆಪಿ ಸಂಸದರಿಗೆ ವಿವರ ನೀಡಿದರು. ಈ ವಿವರ ದೊರೆತ ತಕ್ಷಣ, ಅಡ್ವಾಣಿ ಅವರು ಕಾಂಗ್ರೆಸ್ ಮುಖಂಡರ ಜೊತೆ ತಾವೇ ಮಾತುಕತೆ ನಡೆಸುವುದಾಗಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.