ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು, ‘2ಜಿ’ ಹಾಗೂ ಕಲ್ಲಿದ್ದಲು ಹಂಚಿಕೆ ಹಗರಣಗಳ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ಸ್ವಯಂಸೇವಾ ಸಂಸ್ಥೆ ‘ಸೆಂಟರ್್ ಫಾರ್್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ ಸಿನ್ಹಾ ವಿರುದ್ಧ ಈ ಆರೋಪ ಮಾಡಿತ್ತು. ಆದರೆ ಈ ಮಾಹಿತಿ ಕೊಟ್ಟವರ ಹೆಸರು ಬಹಿರಂಗಪಡಿಸುವಂತೆ ಕೋರ್ಟ್್ ಈ ಹಿಂದೆ ಆದೇಶಿಸಿತ್ತು. ‘ಆರೋಪ ಮೂಲ ಬಹಿರಂಗಪಡಿಸುವುದಕ್ಕೆ ನಮಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಬೇಷರತ್ ಕ್ಷಮೆ ಕೇಳುತ್ತೇವೆ. ದಯವಿಟ್ಟು ಈ ಆದೇಶವನ್ನು ಕೋರ್ಟ್ ವಾಪಸ್ ಪಡೆಯಬೇಕು’ ಎಂದು ಸಂಸ್ಥೆ ಪರ ಹಾಜರಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಹಾಗೂ ಪ್ರಶಾಂತ್ ಭೂಷಣ್ ಕೋರಿಕೊಂಡರು.
‘ನಾವು ಸಿನ್ಹಾ ಚಾರಿತ್ರ್ಯವಧೆ ಮಾಡುತ್ತಿಲ್ಲ. ಆದರೆ, ಅವರ ವಿರುದ್ಧದ ಆರೋಪಗಳನ್ನು ಸುಪ್ರೀಂಕೋರ್ಟ್ ಪರಿಶೀಲಿಸಬೇಕೆಂದು ಆಗ್ರಹಿಸುತ್ತಿದ್ದೇವೆ’ ಎಂದು ದವೆ ಹೇಳಿದರು. ‘ಸ್ವಯಂಸೇವಾ ಸಂಸ್ಥೆಯು ಸಿನ್ಹಾ ವಿರುದ್ಧದ ಆರೋಪದ ಮೂಲಬಹಿರಂಗಪಡಿಸಬೇಕು. ಇಲ್ಲದಿದ್ದರೆ ಯಾರು ಬೇಕಾದರೂ ಸುಪ್ರೀಂಕೋರ್ಟ್-ನಲ್ಲಿ ಆಧಾರರಹಿತ ಆರೋಪ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ಸಿನ್ಹಾ ಪರ ವಕೀಲ ವಿಕಾಸ್ ಸಿಂಗ್ ವಾದಿಸಿದರು.
‘ಸಂಸ್ಥೆಯು ತನ್ನ ಆರೋಪದ ಮೂಲ ಬಹಿರಂಗಪಡಿಸುವುದಕ್ಕೆ ತಯಾರಿಲ್ಲ. ಆದ ಕಾರಣ ಈ ಅರ್ಜಿಯ ವಿಚಾರಣೆ ಮಾಡಬಾರದು’ ಎಂದು ವಿಕಾಸ್ ಸಿಂಗ್ ಸಲ್ಲಿಸಿದ್ದ ಮನವಿ ಯನ್ನೂ ಕೋರ್ಟ್ ತಳ್ಳಿಹಾಕಿತು. ಕೋರ್ಟ್ ತಳೆದ ಈ ನಿಲುವಿನಿಂದ ಸಿನ್ಹಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸಿಬಿಐ ತನಿಖೆ ಮಾಡಿರುವ ಯಾವುದೇ ಪ್ರಕರಣದಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಎಂದ ರಂಜಿತ್್ ಸಿನ್ಹಾ, ಈ ಅರ್ಜಿ ವಿಚಾರಣೆಯನ್ನು ಒಂದೇ ಒಂದು ದಿನ ಮುಂದುವರಿಸಿದರೂ ಅದು ೨ಜಿ ಪ್ರಕರಣದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಆದರೆ, ಸಿನ್ಹಾ ಮನವಿಗೆ ನ್ಯಾಯಪೀಠ ಸೊಪ್ಪು ಹಾಕಲಿಲ್ಲ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್್ ನೆರವು: ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರಿದ್ದ ಪೀಠ, ಸಿನ್ಹಾ ವಿರುದ್ಧದ ಆರೋಪದ ವಿಚಾರಣೆಗೆ ‘೨ಜಿ’ ಪ್ರಕರಣದ ತನಿಖೆಗಾಗಿ ತಾನು ನೇಮಿಸಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್್ ನೆರವು ಕೇಳಿತು. ಸಿನ್ಹಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್್ ಆನಂದ್್ ಗ್ರೋವರ್್ ಅವರಿಗೆ ಹಸ್ತಾಂತರಿಸುವಂತೆ ಸ್ವಯಂಸೇವಾ ಸಂಸ್ಥೆಗೆ ನಿರ್ದೇಶನ ನೀಡಿತು. ಗ್ರೋವರ್್ ಈ ಎಲ್ಲ ಮಾಹಿತಿಗಳನ್ನು ಪರಿಶೀಲಿಸಲಿದ್ದಾರೆ. ಅಕ್ಟೋಬರ್್ ೧೦ರಂದು ನಡೆಯಲಿರುವ ವಿಚಾರಣೆ ವೇಳೆ ಕೋರ್ಟ್ಗೆ ನೆರವು ನೀಡಲಿದ್ದಾರೆ.
ಇಂಥ ಪ್ರಕರಣಗಳಲ್ಲಿ ನಾವು ಆದೇಶ ನೀಡಲು ಆಗದು. ಹಾಗೇನಾದರೂ ಆದೇಶ ನೀಡಿದರೆ ಅದು ಬಹುಕೋಟಿ ಹಗರಣಗಳ ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ
–ಸುಪ್ರೀಂಕೋರ್ಟ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.