ADVERTISEMENT

ಸಿಬಲ್‌ ವರ್ತನೆಗೆ ‘ಸುಪ್ರೀಂ’ ತಪರಾಕಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಸಿಬಲ್‌ ವರ್ತನೆಗೆ ‘ಸುಪ್ರೀಂ’ ತಪರಾಕಿ
ಸಿಬಲ್‌ ವರ್ತನೆಗೆ ‘ಸುಪ್ರೀಂ’ ತಪರಾಕಿ   

ನವದೆಹಲಿ: ಬಾಬರಿ ಮಸೀದಿ–ರಾಮಜನ್ಮ ಭೂಮಿ ಪ್ರಕರಣದಲ್ಲಿ ಕಪಿಲ್‌ ಸಿಬಲ್‌ ಸೇರಿದಂತೆ ಇತರ ಹಿರಿಯ ವಕೀಲರು ಮಾಡಿರುವ ವಾದ ಮತ್ತು ಆ ಸಂದರ್ಭದಲ್ಲಿ ತೋರಿದ ವರ್ತನೆ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಜನರಲ್‌ ನಡುವಣ ಪ್ರಕರಣದಲ್ಲಿ ಬೇರೆ ವಕೀಲರ ನಡವಳಿಕೆಯ ಬಗ್ಗೆಯೂ ಅದು ಕಿಡಿ ಕಾರಿದೆ.

‘ಹಿರಿಯ ವಕೀಲರ ನಿನ್ನೆಯ (ಬುಧವಾರ) ವರ್ತನೆ ಕೆಟ್ಟದಾಗಿತ್ತು. ಅದಕ್ಕೂ ಒಂದು ದಿನ ಮೊದಲು ಇನ್ನಷ್ಟು ಕೆಟ್ಟದಾಗಿತ್ತು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಾಮೂರ್ತಿಗಳ ನ್ಯಾಯಪೀಠ ಹೇಳಿದೆ.

ADVERTISEMENT

‘ದುರದೃಷ್ಟಕರ ಸಂಗತಿ ಎಂದರೆ, ತಾವು ನ್ಯಾಯಾಲಯದಲ್ಲಿ ಜೋರಾದ ಧ್ವನಿಯಲ್ಲಿ ಮಾತನಾಡಬಹುದು ಎಂದು ಹಿರಿಯ ವಕೀಲರ ಸಣ್ಣ ಗುಂಪೊಂದು ಭಾವಿಸಿದೆ. ಆದರೆ ಅದನ್ನು ಸಹಿಸಲು ಸಾಧ್ಯವಿಲ್ಲ... ಇದು ವಾದ ಮಾಡಲು ಮಾಹಿತಿ ಕೊರತೆ ಇರುವುದನ್ನು ಮತ್ತು ಅವರ ಅಸಾಮರ್ಥ್ಯವನ್ನು ತೋರಿಸುತ್ತದೆ. ಅಂಥವರು ಹಿರಿಯ ವಕೀಲರಾಗಲು ಅನರ್ಹರು’ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಹಿರಿಯ ವಕೀಲರು ನ್ಯಾಯಪೀಠದ ಮುಂದೆ ಅತ್ಯಂತ ಒರಟು ಪದಗಳನ್ನು ಬಳಸಿದ ಪ್ರಸಂಗಗಳು ಹಲವು ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನಡೆದಿವೆ.

ಬಾಬರಿ ಮಸೀದಿ–ರಾಮ ಜನ್ಮ ಭೂಮಿ ಪ್ರಕರಣದ ವಿಚಾರಣೆ ವೇಳೆ ಕಪಿಲ್‌ ಸಿಬಲ್‌, ರಾಜೀವ್‌ ಧವನ್‌ ಮತ್ತು ದುಷ್ಯಂತ್‌ ದವೆ ಅವರು ಅರ್ಜಿ ವಿಚಾರಣೆ ನಡೆಸುವ ನ್ಯಾಯಾಲಯದ ತೀರ್ಮಾನವನ್ನು ಪ್ರಶ್ನಿಸಿದ್ದರು. ಜುಲೈ 2019ರವರೆಗೆ ವಿಚಾರಣೆ ಮುಂದೂ ಡಬೇಕು ಎಂದು ಒತ್ತಾಯಿಸಿದ್ದರು.

ಗುರುವಾರ, ಪಾರ್ಸಿ ಮಹಿಳೆಯರೊಬ್ಬರಿಗೆ ಧಾರ್ಮಿಕ ಹಕ್ಕುಗಳನ್ನು ನೀಡುವುದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಐವರು ನ್ಯಾಯಮೂರ್ತಿಗಳ ನ್ಯಾಯ‍ಪೀಠದ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯನ್‌, ‘ನಮ್ಮಲ್ಲಿ ಕೆಲವರು ಸರಿಯಾಗಿ ವರ್ತಿಸುತ್ತಿಲ್ಲ. ಆಂತರಿಕವಾಗಿ ಸ್ವಯಂ ನಿಯಂತ್ರಣದ ಅಗತ್ಯವಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ಭಾವನೆಗಳು ನಮಗೆ ಅರ್ಥವಾಗುತ್ತದೆ. ಒಂದು ವೇಳೆ ವಕೀಲರ ಸಂಘ ಈ ಬಗ್ಗೆ ಕ್ರಮ ಕೈಗೊ ಳ್ಳದಿದ್ದರೆ, ಇಂತಹ ಬೆಳವಣಿಗೆಗಳನ್ನು ನಾವು ಬಲವಂತವಾಗಿ ನಿಯಂತ್ರಿಸ ಬೇಕಾಗುತ್ತದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.