ADVERTISEMENT

ಸುಧಾರಣೆಯ ಇಚ್ಛಾಶಕ್ತಿ ಹೆಚ್ಚೇ ಇದೆ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 19:53 IST
Last Updated 21 ಏಪ್ರಿಲ್ 2017, 19:53 IST
ಸುಧಾರಣೆಯ ಇಚ್ಛಾಶಕ್ತಿ ಹೆಚ್ಚೇ ಇದೆ: ಪ್ರಧಾನಿ
ಸುಧಾರಣೆಯ ಇಚ್ಛಾಶಕ್ತಿ ಹೆಚ್ಚೇ ಇದೆ: ಪ್ರಧಾನಿ   

ನವದೆಹಲಿ: ‘ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಬೇಕಿರುವ ರಾಜಕೀಯ ಇಚ್ಛಾಶಕ್ತಿ ನನ್ನಲ್ಲಿ ಹೆಚ್ಚೇ ಇದೆ. ವಿವಿಧ ಇಲಾಖೆಗಳ ನಡುವೆ ಸಂವಹನಕ್ಕೆ ಇರುವ ಅಡೆತಡೆಗಳನ್ನು ಅಧಿಕಾರಿಗಳು ನಿವಾರಿಸಬೇಕು’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದಲ್ಲಿ ಬದಲಾವಣೆ ತರಲು ಅಧಿಕಾರಿಗಳು ಒಂದು ತಂಡದಂತೆ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು. ‘ತ್ವರಿತವಾಗಿ ಕ್ರಮ ಕೈಗೊಂಡರೆ ಎಂತಹ ಪರಿಣಾಮ ಎದುರಿಸಬೇಕೋ ಎಂದು ಅಧಿಕಾರಿಗಳು ಭಯಪಡಬೇಕಿಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು, ಪ್ರಾಮಾಣಿಕವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರಿಗಳ ಬೆನ್ನಿಗೆ ನಾನು ನಿಲ್ಲುತ್ತೇನೆ’ ಎಂದು ಅವರು ಅಭಯ ನೀಡಿದರು.

‘ಜನರ ಒಳಿತಿಗೆ ತ್ವರಿತವಾಗಿ ನಿರ್ಧಾರ ಕೈಗೊಂಡರೆ ನಿಮ್ಮ ವಿರುದ್ಧ ಯಾರೂ ಬೆರಳು ತೋರಿಸುವುದಿಲ್ಲ’ ಎಂದು ಅವರು ನಾಗರಿಕ ಸೇವೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.

ADVERTISEMENT

ಮಹಾಲೇಖಪಾಲರು (ಸಿಎಜಿ), ಸಿಬಿಐ ಮತ್ತು ಕೇಂದ್ರ ವಿಚಕ್ಷಣಾ ಆಯೋಗವು (ಸಿವಿಸಿ) ತ್ವರಿತ ನಿರ್ಣಯ ಕೈಗೊಳ್ಳಲು ಇರುವ ಅಡೆತಡೆಗಳು ಎಂದು ಕೆಲವು ಅಧಿಕಾರಿಗಳು ಹೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನೀಡಿರುವ ಅಭಯ ಮಹತ್ವ ಪಡೆದಿದೆ.

ಮೋದಿ ಸಭೆಯಲ್ಲಿ ಮೊಬೈಲ್‌ ನಿಷೇಧದ ಕಾರಣ ಬಹಿರಂಗ!

ನವದೆಹಲಿ: ಇ–ಆಡಳಿತವನ್ನು ಬೆಂಬಲಿಸುವ, ಉತ್ತೇಜಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ನೇತೃತ್ವದಲ್ಲಿ ನಡೆಯುವ  ಸಭೆಯಲ್ಲಿ ಭಾಗವಹಿಸುವ ಅಧಿಕಾರಿಗಳು, ಅಲ್ಲಿ ಮೊಬೈಲ್‌ ಬಳಸುವುದರ ಮೇಲೆ ಈ ಹಿಂದೆಯೇ ನಿಷೇಧ ಹೇರಿದ್ದರು. ಇದಕ್ಕೆ ಕಾರಣ ಏನು
ಎಂಬುದನ್ನು ಅವರು ಶುಕ್ರವಾರ ಹೇಳಿದ್ದಾರೆ.

‘ಸಭೆಯ ವೇಳೆಯಲ್ಲೂ ಅಧಿಕಾರಿಗಳು ಮೊಬೈಲ್‌ ನೋಡುತ್ತಾ ಕೂತಿರುತ್ತಾರೆ. ಹೀಗಾಗಿಯೇ ನಾನು ಸಭೆ ನಡೆಸುವಾಗ,  ಸಭೆಯಲ್ಲಿರುವವರು
ಮೊಬೈಲ್‌ ಬಳಸುವುದನ್ನು ನಿಷೇಧಿಸಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ‘ನಾಗರಿಕ ಸೇವಾ ದಿನಾಚರಣೆ’ಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೋಚಿಂಗ್‌ ಕ್ಲಾಸ್‌ಗಳಿಗೆ ಹೋಗುವುದು ನನ್ನಿಂದ ಸಾಧ್ಯವಿರಲಿಲ್ಲ, ಹೀಗಾಗಿ ನಾನು ನಿಮ್ಮಂತೆ ಅಧಿಕಾರಿ ಆಗಲಿಲ್ಲ. ಆದರೆ ಕಳೆದ16 ವರ್ಷಗಳಿಂದ  ನಾನು ಅಧಿಕಾರಿಗಳ ಜತೆ ಕೆಲಸ ಮಾಡುತ್ತಿದ್ದೇನೆ.

ಹೀಗಾಗಿ ನಾನು ಈಗ ನಿರ್ದೇಶಕರ ಮಟ್ಟದ ಅಧಿಕಾರಿಯಾಗಿದ್ದೇನೆ’ ಎಂದು ಚಟಾಕಿ ಹಾರಿಸಿದ್ದಾರೆ.
‘ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳಲ್ಲಿ ತಮ್ಮ ಚಿತ್ರ ತೆಗೆದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಇದರ ಬದಲಿಗೆ  ಅದೇ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಿ.
ಪೋಲಿಯೊ ಲಸಿಕೆ ಕಾರ್ಯಕ್ರಮವಿದ್ದರೆ, ಅದರ ದಿನಾಂಕ, ಸ್ಥಳಗಳ ವಿವರವನ್ನು ಪ್ರಕಟಿಸಿ. ಜನರಿಗೆ ಉಪಯೋಗವಾಗುತ್ತದೆ’ ಎಂದುಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.