ADVERTISEMENT

ಸುನ್ನಿ–ಶಿಯಾಗಳಲ್ಲಿ ಕಿಡಿ ಹೊತ್ತಿಸಿದ ಪ್ರೇಮಸೌಧ!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಲಖನೌ: ಪ್ರೀತಿ, ಪ್ರೇಮದ ಸಂಕೇತ ವಾದ ವಿಶ್ವಪ್ರಸಿದ್ಧ ತಾಜ್‌ಮಹಲ್‌  ಮುಸ್ಲಿಂ ಸಮುದಾಯದ ಎರಡು ಪ್ರಮುಖ ಒಳಪಂಗಡಗಳಾದ ಸುನ್ನಿ ಮತ್ತು ಶಿಯಾಗಳ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿದೆ.

ತಾಜ್‌ಮಹಲ್‌ ಮೇಲೆ ನಿಯಂ­ತ್ರಣ ಸಾಧಿಸಲು ಸುನ್ನಿ ಹಾಗೂ ಶಿಯಾ ಪಂಗಡಗಳು ಪರಸ್ಪರ ಪೈಪೋಟಿಗೆ ಇಳಿದಿರುವುದು ಮುಸ್ಲಿಂ ಸಮುದಾ­ಯದ ಒಡಕಿಗೆ ಕಾರಣವಾಗಿದೆ. ಸುನ್ನಿ ಪಂಗಡದ ನಂತರ ಶಿಯಾಗಳು ತಾಜ್‌ ಮಹಲ್‌ ಮೇಲೆ ಹಕ್ಕು ಸಾಧಿಸಲು ಹೊರಟಿದ್ದಾರೆ.

ಮೊಘಲ್‌ ಚಕ್ರವರ್ತಿ ಷಹಜಹಾನ್‌    ಪತ್ನಿ ಮುಮ್ತಾಜ್‌ ಬೇಗಂ ಶಿಯಾ ಪಂಗಡಕ್ಕೆ ಸೇರಿದ್ದಾಳೆ. ಹೀಗಾಗಿ ಆಕೆಯ ಸ್ಮರಣಾರ್ಥ ನಿರ್ಮಿಸಿರುವ ಈ ಸೌಧ ತಮಗೆ ಸೇರಬೇಕು ಎಂದು ಶಿಯಾ ಧಾರ್ಮಿಕ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.

ತಾಜ್ ಮಹಲ್‌ಅನ್ನು ಶಿಯಾ ವಕ್ಫ್‌ ಮಂಡಳಿಗೆ ಹಸ್ತಾಂತರಿಸುವಂತೆ ಶಿಯಾ ಮುಖಂಡರು ಪ್ರಧಾನಿ,ಗೃಹ ಸಚಿವರು ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಈ ವಿವಾದವನ್ನು ಮೊದಲು ಹುಟ್ಟು ಹಾಕಿದ್ದು ಉತ್ತರ ಪ್ರದೇಶದ ಪ್ರಭಾವಿ ಸಚಿವ ಅಜಂ ಖಾನ್‌.  ಪ್ರೇಮಸೌಧ­ವನ್ನು ಸುನ್ನಿ ವಕ್ಫ್‌ ಮಂಡಳಿಗೆ ಹಸ್ತಾಂತರಿಸು­ವಂತೆ ಇತ್ತೀಚೆಗೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ನಂತರ ತಾಜ್‌ ಮೇಲೆ ನಿಯಂತ್ರಣ ಸಾಧಿಸಲು ಎರಡೂ ಪಂಗಡಗಳ ಮೇಲೆ ಪೈಪೋಟಿ ಆರಂಭವಾಗಿದೆ.

ತಾಜ್‌ ಮಹಲ್‌ ರಾಷ್ಟ್ರೀಯ ಸ್ಮಾರಕವಾಗಿದ್ದು ಇದರಲ್ಲಿ ಅನಗತ್ಯ ವಾಗಿ ರಾಜಕೀಯ ಬೆರೆಸುವುದು ಬೇಡ ಎಂದು ಕೆಲವು ಮುಸ್ಲಿಂ ಮುಖಂಡರು ಅಭಿಪ್ರಾಯ­ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.