ADVERTISEMENT

ಸುಬ್ರತೊ ಡೈರಿಯಲ್ಲಿ ಷಾ ಹೆಸರು

ಸಂಸತ್‌ನಲ್ಲಿ ಪ್ರತಿಧ್ವನಿಸಿದ ಸಹರಾ ಹಗರಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2014, 19:30 IST
Last Updated 1 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ:): ಸಹರಾ ಸಮೂಹದ ಅಧ್ಯಕ್ಷ ಸುಬ್ರತೊ  ರಾಯ್‌ ಕಚೇರಿಯಲ್ಲಿ ಸಿಬಿಐ ವಶಪಡಿಸಿಕೊಂಡ  ಡೈರಿಯಲ್ಲಿ ಬಿಜೆಪಿ ನಾಯಕರೊಬ್ಬರ ಹೆಸರು ಇದೆ ಎಂದು ಆರೋಪಿಸುವ ಮೂಲಕ ತೃಣಮೂಲ ಕಾಂಗ್ರೆಸ್‌ ಪಕ್ಷವು ಸಂಸತ್‌ನಲ್ಲಿ ಸೋಮವಾರ ಭಾರಿ ಕೋಲಾಹಲ ಎಬ್ಬಿಸಿತು.

ಈ ವಿಷಯವಾಗಿ ಟಿಎಂಸಿ ಹಾಗೂ ಬಿಜೆಪಿ ನಡುವೆ ಪರಸ್ಪರ ವಾಗ್ದಾಳಿ ನಡೆದು ಕೊನೆಗೆ ಟಿಎಂಸಿ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಕೋಲ್ಕತ್ತದಲ್ಲಿ ಭಾನುವಾರ ನಡೆದ ರ್‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲಿಯೇ ಟಿಎಂಸಿ  ಸದಸ್ಯರು ಸಂಸತ್‌ನಲ್ಲಿ ಸಹರಾ ಹಗರಣವನ್ನು ಕೆದಕಿದರು.

ಲೋಕಸಭೆಯಲ್ಲಿ ಟಿಎಂಸಿ ಸದಸ್ಯರು  ಸಭಾಧ್ಯಕ್ಷರ ಪೀಠದತ್ತ ನುಗ್ಗಿ ಘೋಷಣೆ ಕೂಗಿದರು. ಸುಬ್ರತೊ ರಾಯ್‌ ಅವರಿಂದ ವಶಪಡಿಸಿಕೊಂಡ ಡೈರಿಯಲ್ಲಿ ಬಿಜೆಪಿ ನಾಯಕರೊಬ್ಬರ ಹೆಸರು ಇರುವುದಕ್ಕೆ ಸಿಬಿಐ ಏನು ಕ್ರಮ ಕೈಗೊಂಡಿದೆ  ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು ಎಂದು ಆಗ್ರಹಿಸಿದರು.

ಈ ವಿಷಯ ಚರ್ಚಿಸುವುದಕ್ಕೆ ಪ್ರಶ್ನೋತ್ತರ ವೇಳೆಯನ್ನು ಮುಂದೂ­ಡಬೇಕು ಎಂದು ಟಿಎಂಸಿ ಮುಖಂಡ ಸುದೀಪ್‌ ಬಂದೋಪಾಧ್ಯಾಯ ಕೊಟ್ಟಿದ್ದ ನೋಟಿಸನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌್ ತಿರಸ್ಕರಿಸಿದರು.

***
ಸಹರಾ ಸಮೂಹದ ಅಧ್ಯಕ್ಷ ಸುಬ್ರತೊ  ರಾಯ್‌ ಡೈರಿಯಲ್ಲಿ ಬಿಜೆಪಿ ಅಧ್ಯಕ್ಷ  ಅಮಿತ್‌ ಷಾ ಹಾಗೂ ‘ಎನ್‌ಎಂ’ ಎಂಬ ಇನ್ನೊಂದು ಹೆಸರು ಕೂಡ ಇದೆ  ಎಂಬ ಮಾಹಿತಿ ನಮಗೆ ಸಿಕ್ಕಿದೆ. ಸಿಬಿಐ ಈ ಹೆಸರುಗಳನ್ನು ಬಹಿರಂಗಪಡಿಸುತ್ತಿಲ್ಲ. ಸರ್ಕಾರ ಈ ವಿಷಯವಾಗಿ ಸ್ಪಷ್ಟನೆ ನೀಡಬೇಕು

–ಸುದೀಪ್‌ ಬಂದೋಪಾಧ್ಯಾಯ, ಟಿಎಂಸಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT