ADVERTISEMENT

ಸುಷ್ಮಾ ವಿರುದ್ಧ ಹೊಸ ಆರೋಪ

ಲಲಿತ್‌ ಮೋದಿ ಕಂಪೆನಿಯಲ್ಲಿ ಕೌಶಲ್‌ ಸ್ವರಾಜ್‌ಗೆ ನಿರ್ದೇಶಕ ಸ್ಥಾನದ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2015, 19:36 IST
Last Updated 1 ಜುಲೈ 2015, 19:36 IST

ನವದೆಹಲಿ: ಸುಷ್ಮಾ ಸ್ವರಾಜ್‌ ಅವರ ಪತಿ ಕೌಶಲ್‌ ಸ್ವರಾಜ್‌ ಅವರಿಗೆ ಲಲಿತ್‌ ಮೋದಿ ತಮ್ಮ ಕುಟುಂಬದ ಒಡೆತನದ ಕಂಪೆನಿಯಲ್ಲಿ ‘ಬದಲಿ ನಿರ್ದೇಶಕ ಹುದ್ದೆ’ ಕೊಡಲು ಅಪೇಕ್ಷಿಸಿದ್ದರು ಎಂಬ ಸಂಗತಿ ಬಯಲಾಗಿದೆ. ಇದರಿಂದ ಸುಷ್ಮಾ ವಿರುದ್ಧದ ‘ಹಿತಾಸಕ್ತಿ ಸಂಘರ್ಷ’ ಆರೋಪಗಳಿಗೆ ಬಲ ಬಂದಂತಾಗಿದೆ.

ಸುಷ್ಮಾ ರಾಜೀನಾಮೆ ಬೇಡಿಕೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್‌, ‘ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಮೌನ ಮುರಿಯಬೇಕು. ಕೌಶಲ್‌ ಸ್ವರಾಜ್‌ ಅವರಿಗೆ ಲಲಿತ್‌ ಮೋದಿ ನಿರ್ದೇಶಕ ಹುದ್ದೆ ನೀಡಲು ಮುಂದೆ ಬಂದಿದ್ದ ಸಂಗತಿ ಕುರಿತು ಬಾಯಿ ಬಿಡಬೇಕು ಎಂದು ಆಗ್ರಹಿಸಿದೆ.

ಕೌಶಲ್‌ ಅವರಿಗೆ ಲಲಿತ್‌ ಮೋದಿ ‘ಇಂಡೊಫಿಲ್‌’ ಕಂಪೆನಿಯ ಬದಲಿ ನಿರ್ದೇಶಕ ಸ್ಥಾನ ಕೊಡಲು ಮುಂದೆ ಬಂದಿದ್ದರು. ಕೌಶಲ್‌ ಸ್ವರಾಜ್‌ ಬೇಡವೆಂದರು. ಕಂಪೆನಿಯ ನಿರ್ದೇಶಕ ಮಂಡಳಿ ಈ ಪ್ರಸ್ತಾವನೆ ಪರಿಗಣಿಸುವ ಮೊದಲೇ ಹಿಂದೆ ಪಡೆಯಲಾಯಿತು.

ಇಂಡೊಫಿಲ್‌ ಮುಂಬೈ ಮೂಲದ ರಾಸಾಯನಿಕ ಕಂಪೆನಿಯಾಗಿದ್ದು, ಲಲಿತ್‌ ಮೋದಿ ಅವರ ತಂದೆ ಕೆ.ಕೆ. ಮೋದಿ ಅದರ ಮುಖ್ಯಸ್ಥರಾಗಿದ್ದಾರೆ. ಲಲಿತ್‌ ಮೋದಿ ಕುಟುಂಬದ ಇನ್ನುಳಿದ ಸದಸ್ಯರೂ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಕೌಶಲ್‌ ಸ್ವರಾಜ್‌ ಅವರಿಗೆ ಬದಲಿ ನಿರ್ದೇಶಕ ಸ್ಥಾನ ನೀಡಲು ತಮ್ಮ ಪುತ್ರ ಲಲಿತ್‌ ಉದ್ದೇಶಿಸಿದ್ದರು. ಆದರೆ, ಅದು ಮಂಡಳಿ ಪರಿಶೀಲನೆಗೆ ಬರುವ ಮೊದಲೇ ಹಿಂದಕ್ಕೆ ಪಡೆದರು ಎಂದು ಕೆ.ಕೆ. ಮೋದಿ ಪ್ರತಿಕ್ರಿಯಿಸಿದ್ದಾರೆ.

ಕೌಶಲ್‌ ಅವರು ಇಂಡೊಫಿಲ್‌ ನಿರ್ದೇಶಕ ಮಂಡಳಿಯಲ್ಲಿ ಇಲ್ಲದ ಮೇಲೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಕೇಳಿದರು.
ನೀತಿ– ನಿಯಮ ಪಾಲಿಸದೆ ಯಾವುದೇ ನಿರ್ದೇಶಕರನ್ನು ನೇಮಕ ಮಾಡಲು ಸಾಧ್ಯವಿಲ್ಲ ಎಂದೂ ಕೆ.ಕೆ.ಮೋದಿ ಸ್ಪಷ್ಟಪಡಿಸಿದರು.

ಪ್ರಧಾನಿ ಮೌನ ಮುರಿಯಲಿ: ಕೌಶಲ್‌ ಸ್ವರಾಜ್‌ ಅವರಿಗೆ ಇಂಡೊಫಿಲ್‌ ಕಂಪೆನಿಯ ಬದಲಿ ನಿರ್ದೇಶಕ ಹುದ್ದೆ ನೀಡಲು ಲಲಿತ್‌ ಮೋದಿ ಮುಂದೆ ಬಂದಿರುವ ಕುರಿತು ನರೇಂದ್ರ ಮೋದಿ ಅವರು ಮೌನ ಮುರಿದು ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಒತ್ತಾಯಿಸಿದ್ದಾರೆ.

ಸಚಿವರ ಹಿತಾಸಕ್ತಿ ಸಂಘರ್ಷದ ವಿಷಯದಲ್ಲಿ ಬಿಜೆಪಿ ಭಂಡತನ ಮಾಡುತ್ತಿದೆ. ಪ್ರಧಾನಿ ಮೋದಿ ದಿವ್ಯ ಮೌನ ತಾಳಿದ್ದಾರೆ ಎಂದು ಬುಧವಾರ ಮನುಸಿಂಘ್ವಿ ದೂರಿದರು. ನೀವು ಮುಚ್ಚಿಟ್ಟಷ್ಟೂ ಹೆಚ್ಚು ಸಂಗತಿ ಹೊರಗೆ ಬರುತ್ತದೆ ಎಂದು ಎಚ್ಚರಿಸಿದರು.

ಸುಷ್ಮಾ ಸ್ವರಾಜ್‌ ಆರೋಪ ಮುಕ್ತರಾಗಿ ಹೊರ ಬರಬೇಕು. ಸುಷ್ಮಾ ಸ್ವರಾಜ್‌ ಎಷ್ಟು ಸಲ ಲಲಿತ್‌ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಅವರ ಕುಟುಂಬದ ಯಾವ ಸದಸ್ಯರು ಐಪಿಎಲ್‌ ಮಾಜಿ ಮುಖ್ಯಸ್ಥರ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಆಗ್ರಹಿಸಿದರು.

ಲಲಿತ್‌ ಮೋದಿ ಅವರ ಪ್ರಕರಣದಲ್ಲಿ ಹಿಂದಿನ ಯುಪಿಎ ಸರ್ಕಾರ ಬ್ರಿಟನ್‌ ಆಡಳಿತಕ್ಕೆ ಬರೆದಿರುವ ಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಸುರ್ಜೆವಾಲಾ ಒತ್ತಾಯಿಸಿದರು. ವಿವಾದದಲ್ಲಿ ಭಾಗಿಯಾದ ಆರೋಪ ಹೊತ್ತ ಸುಷ್ಮಾ ಸ್ವರಾಜ್‌ ಹಾಗೂ ವಸುಂಧರಾ ಅವರ ರಾಜೀನಾಮೆ ಪಡೆಯಬೇಕು ಎಂಬ ನಿಲುವನ್ನು ಪುನರುಚ್ಚಾರ ಮಾಡಿದರು.
*
ವರುಣ್‌ ವಿರುದ್ಧ ಲಲಿತ್‌ ಆರೋಪ
ನವದೆಹಲಿ (ಪಿಟಿಐ):
ಐಪಿಎಲ್‌ ಹಗರಣದ ಪ್ರಮುಖ ಆರೋಪಿ ಲಲಿತ್‌ ಮೋದಿ ಅವರ ಬಾಯಿಗೆ ಇದೀಗ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಹಾಗೂ ಬಿಜೆಪಿ ಸಂಸದ ವರುಣ್‌ ಗಾಂಧಿ    ಆಹಾರವಾಗಿದ್ದಾರೆ.

‘ವರುಣ್‌ ಲಂಡನ್‌ನಲ್ಲಿ ನನ್ನನ್ನು ಭೇಟಿಯಾಗಿದ್ದರು. ಸೋನಿಯಾ ಅವರ ನೆರವಿನಿಂದ  ವಿವಾದ ಬಗೆಹರಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ಸಲಹೆ ನೀಡಿದ್ದರು’ ಎಂದು ಲಲಿತ್‌ ಆರೋಪ ಮಾಡಿದ್ದಾರೆ.

ಆದರೆ  ಇದು ಆಧಾರರಹಿತ ಹಾಗೂ ಅಸಂಬದ್ಧ ಆರೋಪ ಎಂದು ವರುಣ್‌ ಪ್ರತಿಕ್ರಿಯಿಸಿದ್ದಾರೆ. ‘ಕೆಲವು ವರ್ಷಗಳ ಹಿಂದೆ ವರುಣ್‌ ನನ್ನ ಮನೆಗೆ ಬಂದಿದ್ದರು.  ಸೋನಿಯಾ ನೆರವಿನಿಂದ ಎಲ್ಲವನ್ನೂ ಬಗೆಹರಿಸಬಲ್ಲೆ ಎಂದಿದ್ದರು.  ಅಲ್ಲದೇ ಇಟಲಿಯಲ್ಲಿರುವ ಸೋನಿಯಾ ಸಹೋದರಿಯನ್ನು ಭೇಟಿ ಮಾಡುವಂತೆ ಸಲಹೆ ನೀಡಿದ್ದರು’ ಎಂದೂ  ಲಲಿತ್‌ ಟ್ವೀಟ್‌ ಮಾಡಿದ್ದಾರೆ.

‘ಇದು ಶುದ್ಧ ಸುಳ್ಳು. ಇಂತಹ ಅಸಂಬದ್ಧ ಮಾತಿಗೆ ಪ್ರತಿಕ್ರಿಯೆ ನೀಡುವುದು ನನ್ನ ಯೋಗ್ಯತೆಗೆ ತಕ್ಕುದಲ್ಲ’ ಎಂದು ವರುಣ್‌ ಹೇಳಿದ್ದಾರೆ.
ಈ ನಡುವೆ, ಬಿಜೆಪಿ ವರುಣ್‌ ಬೆಂಬಕ್ಕೆ ನಿಂತಿದೆ.  ‘ ವರುಣ್‌ ಹಾಗೂ ಸೋನಿಯಾ ಬೇರೆ ಬೇರೆ ಪಕ್ಷದಲ್ಲಿ ಇದ್ದಾರೆ. ಎರಡೂ ಕುಟುಂಬದ ಮಧ್ಯೆ ಎಂತಹ ಬಾಂಧವ್ಯ ಇದೆ ಎನ್ನುವುದು ಇಡೀ ಜಗತ್ತಿಗೇ ಗೊತ್ತಿದೆ’ ಎಂದು ಬಿಜೆಪಿ ವಕ್ತಾರ ಶಹನವಾಜ್‌ ಹುಸೇನ್‌ ಅವರು ಹೇಳಿದ್ದಾರೆ.
*
ಮುಖ್ಯಾಂಶಗಳು
* ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಬಲ
* ಪ್ರಧಾನಿ ಪ್ರತಿಕ್ರಿಯೆಗೆ ಕಾಂಗ್ರೆಸ್‌ ಪಟ್ಟು
* ಸುಷ್ಮಾ ರಾಜೀನಾಮೆಗೆ ಹೆಚ್ಚಿದ ಒತ್ತಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT