ADVERTISEMENT

‘ಹಲಾಲ್ ದಾಸ್ತಾ’ ಹೊಸ ಉಗ್ರರ ಸಂಘ ಹುಟ್ಟು ಹಾಕಿದ ಪಾಕಿಸ್ತಾನ ಪಡೆ

ಏಜೆನ್ಸೀಸ್
Published 5 ಅಕ್ಟೋಬರ್ 2017, 11:45 IST
Last Updated 5 ಅಕ್ಟೋಬರ್ 2017, 11:45 IST
‘ಹಲಾಲ್ ದಾಸ್ತಾ’ ಹೊಸ ಉಗ್ರರ ಸಂಘ ಹುಟ್ಟು ಹಾಕಿದ ಪಾಕಿಸ್ತಾನ ಪಡೆ
‘ಹಲಾಲ್ ದಾಸ್ತಾ’ ಹೊಸ ಉಗ್ರರ ಸಂಘ ಹುಟ್ಟು ಹಾಕಿದ ಪಾಕಿಸ್ತಾನ ಪಡೆ   

ನವದೆಹಲಿ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ  ಐಎಸ್ಐ ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ‘ಹಲಾಲ್ ದಾಸ್ತಾ’ ಎಂಬ ಹೊಸ ಉಗ್ರರ ಸಂಘವನ್ನು ಹುಟ್ಟು ಹಾಕಿದೆ.

ಉಗ್ರರ ಈ ಹೊಸ ತಂಡವನ್ನು ‘ಹಂತಕರ ತಂಡ’ ಎಂದು ಕರೆಯಲಾಗುತ್ತಿದ್ದು, ಲಷ್ಕರ್–ಇ–ತಯೆಬಾ ಸಂಘಟನೆಯ ಉಗ್ರರು ಹುಟ್ಟುಹಾಕಿರುವ ತಂಡ ಎಂದು  ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

ಹಲಾಲ್ ದಾಸ್ತಾವನ್ನು ಪಾಕಿಸ್ತಾನದ ಭದ್ರತಾ ಪಡೆ ನಿರ್ವಹಣೆ ಮಾಡುತ್ತಿದೆ. ಸುರಾನ್‌ಕೋಟ್‌ ಅನ್ನು ದ್ವಂಸಗೊಳಿಸುವ, ಭಾರತೀಯ ಸೇನೆ , ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯನ್ನು ನಾಶಪಡಿಸುವ ಉದ್ದೇಶ ಹೊಂದಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜೈಶ್‌–ಎ–ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಲೂದ್ದೀನ್, ಲಷ್ಕರ್–ಇ–ತಯೆಬಾ ಹಾಗೂ ಹಿಜ್‌ಬುಲ್ ಸಂಘಟನೆಯ ಹಿರಿಯ ಕಮಾಂಡರ್‌ಗಳ ಜತೆ ಐಎಸ್‌ಐ ಅಧಿಕಾರಿಗಳು ಸಭೆ ನಡೆಸಿದ್ದು, ದಾಳಿ ನಡೆಸುವ ಸ್ಥಳಗಳ ಕುರಿತಾಗಿ ನೀಲಿ ನಕ್ಷೆ ತಯಾರಿಸುವ ಕುರಿತಾಗಿ ಮಾತುಕತೆ ನಡೆದಿದೆ ಎಂದು ಗೊತ್ತಾಗಿದೆ.

ಕಳೆದ ವಾರ ಜಮ್ಮುಕಾಶ್ಮೀರದ ಕುಪ್ವಾರದ ಬಳಿ ನುಸುಳುತ್ತಿದ್ದ ಪಾಕಿಸ್ತಾನ ಭದ್ರತಾ ಪಡೆಯ ಏಳರಿಂದ ಎಂಟು ಮಂದಿಯ ಮೇಲೆ ಭಾರತೀಯ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಹೊಸ ಸಂಘವನ್ನು ಹುಟ್ಟು ಹಾಕಿರುವ ಪಾಕಿಸ್ತಾನಿ ಪಡೆ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.