ADVERTISEMENT

ಹಿಮಾಚಲ ಪ್ರದೇಶ: ಹಿಮದಲ್ಲಿ ಸಿಲುಕಿದ 70 ಮಂದಿ ಪ್ರವಾಸಿಗರು

ರಕ್ಷಿಸುವ ಕಾರ್ಯಾಚರಣೆ ಆರಂಭ

ಪಿಟಿಐ
Published 8 ಏಪ್ರಿಲ್ 2017, 11:53 IST
Last Updated 8 ಏಪ್ರಿಲ್ 2017, 11:53 IST
ಹಿಮಾಚಲ ಪ್ರದೇಶ: ಹಿಮದಲ್ಲಿ ಸಿಲುಕಿದ 70 ಮಂದಿ ಪ್ರವಾಸಿಗರು
ಹಿಮಾಚಲ ಪ್ರದೇಶ: ಹಿಮದಲ್ಲಿ ಸಿಲುಕಿದ 70 ಮಂದಿ ಪ್ರವಾಸಿಗರು   
ಶಿಮ್ಲಾ: ಕಳೆದ ಎರಡು ದಿನಗಳಿಂದ ಹಿಮಾಚಲ ಪ್ರದೇಶದ ಕಿನೌರ್‌ ಜಿಲ್ಲೆಯ ಚಿತ್ಕಲ್‌ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಹಿಮದಿಂದಾಗಿ 70 ಮಂದಿ ಪ್ರವಾಸಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಶನಿವಾರ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಲಾಗಿದೆ.
 
ಈ 70 ಮಂದಿ ಕೊಲ್ಕತ್ತಾ ಬಳಿಯ ಬರ್ಸಾತ್   ನಗರದವರು. ಈ ಪ್ರವಾಸಿಗರ ತಂಡದಲ್ಲಿ 34 ಮಂದಿ ಮಹಿಳೆಯರು ಮತ್ತು 11 ಮಕ್ಕಳೂ ಇದ್ದಾರೆ. ಇವರೆಲ್ಲರೂ ಏಪ್ರಿಲ್‌ 4ರಂದು ಚಿತ್ಕಲ್‌ಗೆ ಬಂದಿದ್ದರು. 
 
ಕಿನೌರ್ ಜಿಲ್ಲೆಯಲ್ಲಿರುವ ಚಿತ್ಕಲ್ ಚೀನಾದ ಗಡಿಭಾಗದಲ್ಲಿರುವ ಗ್ರಾಮ. ಸದ್ಯ ಇಲ್ಲಿ 3 ರಿಂದ 4 ಅಡಿಯಷ್ಟು ಎತ್ತರಕ್ಕೆ ಹಿಮ ತುಂಬಿದೆ.
 
‘ನಾವು ಇಲ್ಲಿಗೆ ಬಂದಾಗ ದಟ್ಟ ಹಿಮ ಸುರಿಯುತ್ತಿತ್ತು. ನಾವು ತೆಗೆದುಕೊಂಡು ಹೋಗಿದ್ದ ಆಹಾರ ಬೇಗನೇ ಖಾಲಿಯಾಯಿತು. ಮತ್ತೆ ಆಹಾರ ತರಲು ನಮಗೆ ದಾರಿಯೇ ಇರಲಿಲ್ಲ’ ಎಂದು ಪ್ರವಾಸಿಗ ಸುಖಂತೋ ಸಿಕಂದರ್ ಅವರು ಅಳಲು ತೋಡಿಕೊಂಡಿದ್ದಾರೆ.
 
ಕಳೆದ ಗುರುವಾರ ಹಿಮದಲ್ಲಿ ಸಿಲುಕಿದ್ದ 5 ಮಂದಿ ಚಾರಣಿಗರನ್ನು ರಕ್ಷಿಸಲಾಗಿತ್ತು. ಈ ಐದು ಮಂದಿ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಉಳಿದ ಮೂವರ ಪರಿಸ್ಥಿತಿ ಗಂಭೀರವಾಗಿದೆ.
 
‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಗೌತಮ್‌ ದೇಬ್ ಹೇಳಿದ್ದಾರೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.