ADVERTISEMENT

‘ಅರ್‌ಹರ್‌ ಮೋದಿ’ ಆರ್ತನಾದ

ಬೆಲೆ ಏರಿಕೆ ಬಗ್ಗೆ ಕೇಂದ್ರವನ್ನು ಛೇಡಿಸಿದ ರಾಹುಲ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
‘ಅರ್‌ಹರ್‌ ಮೋದಿ’ ಆರ್ತನಾದ
‘ಅರ್‌ಹರ್‌ ಮೋದಿ’ ಆರ್ತನಾದ   

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಹಳ್ಳಿಗಳಿಂದ, ನಗರದ ಬೀದಿಗಳಿಂದ ಅರ್‌ಹರ್‌ ಮೋದಿ ಎಂಬ ಆರ್ತನಾದ ಕೇಳಿಬರುತ್ತಿದೆ’ ಎಂದರು.

2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಬಲಿಗರು ‘ಹರ ಹರ ಮೋದಿ’ ಎಂಬ ಘೋಷಣೆ ಬಳಸಿದ್ದರು. ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ರಾಹುಲ್ ಈ ಘೋಷಣೆಯನ್ನು ತುಸು ಬದಲಾಯಿಸಿ, ಬೆಲೆ ಏರಿಕೆಯ ಬಿಸಿಯಿಂದಾಗಿ ‘ಅರ್‌ಹರ್‌  ಮೋದಿ’ (ತೊಗರಿ ಬೇಳೆಗೆ ಉತ್ತರ ಭಾರತದಲ್ಲಿ ಅರ್‌ಹರ್‌ ಎನ್ನುತ್ತಾರೆ) ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ ಎಂದು ಛೇಡಿಸಿದರು.

ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಬೇಳೆಕಾಳುಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

‘ಚುನಾವಣೆಗೆ ಮೊದಲಿನ ಭಾಷಣಗಳಲ್ಲಿ ಮೋದಿ ಅವರು ಯುಪಿಎ ಸರ್ಕಾರವನ್ನು ಟೀಕಿಸುತ್ತಿದ್ದರು. ಬೆಲೆ ಏರಿಕೆ ತಡೆಯಲು ಕೇಂದ್ರ ವಿಫಲವಾಗಿದೆ ಎನ್ನುತ್ತಿದ್ದರು. ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವುದಾಗಿ ಭರವಸೆ ನೀಡಿದ್ದರು. ಆದರೆ ತೊಗರಿ ಬೇಳೆಯ ಇಂದಿನ ಬೆಲೆ ಪ್ರತಿ ಕಿಲೋಗೆ ₹ 235 ಆಗಿದೆ. ಯುಪಿಎ ಅವಧಿಯಲ್ಲಿ ಇದರ ಬೆಲೆ ₹ 75 ಆಗಿತ್ತು’ ಎಂದು ರಾಹುಲ್ ವಿವರಿಸಿದರು.

ಬೇಳೆಕಾಳುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿ, ಮಧ್ಯವರ್ತಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.

‘ತಮ್ಮ ಇಚ್ಛೆ ಪ್ರಧಾನಿಯಾಗುವುದಲ್ಲ, ಜನರ ಸೇವಕ ಆಗುವುದು ಎಂಬುದಾಗಿ ಮೋದಿ ಅವರು ಹೇಳಿಕೊಂಡಿದ್ದಾರೆ. ಆದರೆ, ನಿಮ್ಮ ಮೂಗಿನ ಅಡಿಯಲ್ಲೇ ದರ ಏರಿಕೆ ಆಗುತ್ತಿದೆ. ಅಗತ್ಯ ವಸ್ತುಗಳ ದರ ಯಾವಾಗ ಕಡಿಮೆಯಾಗುತ್ತದೆ ಹೇಳಿ’ ಎಂದು ರಾಹುಲ್ ಪ್ರಧಾನಿಯವರನ್ನು ಆಗ್ರಹಿಸಿದರು.

ರಾಹುಲ್‌ ಅವರಿಗೆ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ‘ಆರ್ಭಟಿಸುವುದರಿಂದ ಅಂಕಿ–ಅಂಶಗಳನ್ನು ಮುಚ್ಚಿಡಲು ಆಗುವುದಿಲ್ಲ’ ಎಂದರು.

ಬೇಳೆಕಾಳುಗಳ ಬೆಲೆ ಹೆಚ್ಚುತ್ತಿರುವುದು ಕಳವಳದ ವಿಚಾರ ಎಂಬುದನ್ನು ಒಪ್ಪಿಕೊಂಡ ಜೇಟ್ಲಿ, ಬೆಲೆ ಏರಿಕೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ, ಬೇಡಿಕೆ ಮತ್ತು ಪೂರೈಕೆ ನಡುವಣ ಅಂತರ ತಗ್ಗಿಸಲಾಗುತ್ತಿದೆ ಎಂದು ವಿವರಿಸಿದರು.

‘ಸಮಸ್ಯೆಗಳನ್ನು ನೀತಿಗಳ ಮೂಲಕ ಪರಿಹರಿಸಲಾಗುತ್ತದೆ. ದಿನಾಂಕ ನಿಗದಿಯ ಮೂಲಕ ಅಲ್ಲ’ ಎಂದು ರಾಹುಲ್‌ ಅವರನ್ನು ಉದ್ದೇಶಿಸಿ ಹೇಳಿದರು.

ಹೆಚ್ಚಿನ ಬಡ್ಡಿ ದರ ವಿಧಿಸುತ್ತಿದ್ದ, ತೀರಾ ಕಡಿಮೆ ಸಂಪನ್ಮೂಲ ಇದ್ದ ಅರ್ಥ ವ್ಯವಸ್ಥೆಯನ್ನು ಎನ್‌ಡಿಎ ಸರ್ಕಾರವು ಯುಪಿಎಯಿಂದ ಬಳುವಳಿಯಾಗಿ ಪಡೆದಿದೆ ಎಂದು ಜೇಟ್ಲಿ ಕಾಂಗ್ರೆಸ್ ಮುಖಂಡರನ್ನು ಕುಟುಕಿದರು.

ಮೋದಿ ಅವರ ಚುನಾವಣಾ ಘೋಷಣೆಗಳ ಬಗ್ಗೆ ರಾಹುಲ್ ಆಡಿದ ಮಾತಿಗೆ ಉತ್ತರಿಸಿದ ಜೇಟ್ಲಿ, ‘ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆ ತಡೆಯುವುದಾಗಿ ಎಲ್ಲ ಅಭ್ಯರ್ಥಿಗಳೂ ಹೇಳುತ್ತಾರೆ’ ಎಂದು ಹೇಳಿದರು.

ಹೆದ್ದಾರಿಗಳ ಅಭಿವೃದ್ಧಿ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಹೂಡಿಕೆ ಹೆಚ್ಚಿಸಿ ಅರ್ಥ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಪ್ರಯತ್ನ ಎನ್‌ಡಿಎ ಸರ್ಕಾರದಿಂದ ಆಗಿದೆ ಎಂದು ಜೇಟ್ಲಿ ಲೋಕಸಭೆಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.