ADVERTISEMENT

‘ಅಲ್ಪಸಂಖ್ಯಾತ ಹಣೆಪಟ್ಟಿ ಕೈಬಿಡಿ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ (ಪಿಟಿಐ): ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಬೇಕು ಇಲ್ಲವೇ ‘ಅಲ್ಪಸಂಖ್ಯಾತರು’ ಎಂಬ ಹಣೆಪಟ್ಟಿಯನ್ನು ತೆಗೆಯಬೇಕು ಎಂದು ಹಿಂದುತ್ವವಾದಿ ನಾಯಕರಾದ ಪ್ರವೀಣ್‌ ತೊಗಾಡಿಯಾ ಮತ್ತು ಸಂಸದ ಸಾಕ್ಷಿ ಮಹಾರಾಜ್‌ ಆಗ್ರಹಿಸಿದ್ದಾರೆ.

‘ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರನ್ನು ಶಿಕ್ಷಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ತೊಗಾಡಿಯಾ ಹೇಳಿದರೆ, ‘ಮುಸ್ಲಿಮರಿಗೆ ನೀಡಿರುವ ಅಲ್ಪ ಸಂಖ್ಯಾತರು ಎಂಬ ಹಣೆಪಟ್ಟಿಯನ್ನು ಕೈಬಿಡಬೇಕು’ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಒತ್ತಾಯಿಸಿದ್ದಾರೆ.

ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಜರ್‌’ನಲ್ಲಿ ಬರೆದ ಲೇಖನದಲ್ಲಿ, ಮುಸ್ಲಿಮರು ನಡೆಸುತ್ತಿರುವ ‘ಜನಸಂಖ್ಯಾ ಜಿಹಾದ್‌’ನಿಂದ ಹಿಂದೂಗಳು ನಿರ್ಮೂಲನವಾಗುವ ಸಾಧ್ಯತೆಯಿದೆ ಎಂದೂ ತೊಗಾಡಿಯಾ ಆತಂಕ ವ್ಯಕ್ತಪಡಿಸಿದ್ದಾರೆ. ‘ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವುದರ ಮೇಲೆ ಕಡಿವಾಣ ಹಾಕಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

‘ಮುಸ್ಲಿಮರು ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಕಾಶ್ಮೀರದಲ್ಲಿ ಶೇ 90 ಕ್ಕೂ ಅಧಿಕ ಮಂದಿ ಮುಸ್ಲಿಮರಿದ್ದಾರೆ. ಇತರ ರಾಜ್ಯಗಳ ಕೆಲ ಜಿಲ್ಲೆಗಳಲ್ಲಿ ಅವರ ಜನಸಂಖ್ಯೆ ಶೇ 70, 80, 90 ರಷ್ಟಿದೆ. ಆದ್ದರಿಂದ ಅವರು ಅಲ್ಪಸಂಖ್ಯಾತರಲ್ಲ’ ಎಂದು ಮಹಾರಾಜ್‌ ಹೇಳಿದ್ದಾರೆ. 2001–11ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಶೇ 16.8 ರಷ್ಟು ಹೆಚ್ಚಳವಾಗಿದ್ದರೆ, ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಶೇ 24.7 ರಷ್ಟು ಹೆಚ್ಚಳವಾಗಿದೆ ಎಂದು ಹೋದ ವಾರ  ಬಿಡುಗಡೆಯಾದ ಜನಗಣತಿಯ ಮಾಹಿತಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT