ADVERTISEMENT

‘ತೃತೀಯ ಲಿಂಗ’: ಸುಪ್ರೀಂ ಕೋರ್ಟ್‌ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 19:30 IST
Last Updated 15 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಲೈಂಗಿಕ ಅಲ್ಪ­ಸಂಖ್ಯಾ­ತರಿಗೆ (ನಪುಂಸ­ಕರು) ‘ಮೂರನೇ ಲಿಂಗ­’ದವರು ಎಂದು ಕಾನೂನಿನ ಮಾನ್ಯತೆ ನೀಡುವ ಮೂಲಕ ಸುಪ್ರೀಂ­ಕೋರ್ಟ್‌ ಮಂಗಳ­ವಾರ ಐತಿಹಾಸಿಕ ತೀರ್ಪು ನೀಡಿದೆ.

ಈ ‘ತೃತೀಯ ಲಿಂಗ’ದವರು ಸಾಮಾ­ಜಿಕ ಮತ್ತು ಶೈಕ್ಷಣಿ­ಕ­ವಾಗಿ ಹಿಂದುಳಿ­ದವರು ಎಂದು ಪರಿಗಣಿಸಿ ವಿದ್ಯಾಭ್ಯಾಸ ಮತ್ತು ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀಡು­ವಂತೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಸ್ತ್ರೀ ಇಲ್ಲವೇ ಪುರುಷರಲ್ಲದ ಲೈಂಗಿಕ ಅಲ್ಪಸಂಖ್ಯಾತರು ಎದುರಿಸು­ತ್ತಿ­ರುವ ಅಭದ್ರತೆ, ಶೋಷಣೆ, ಲೈಂಗಿಕ ದೌರ್ಜನ್ಯ, ಒತ್ತಡ, ಆತಂಕ­ಗಳನ್ನು ದೂರ ಮಾಡಿ ಅವರನ್ನು ಸಮಾಜದ ಮುಖ್ಯ­ವಾಹಿನಿಗೆ ತರಲು ನ್ಯಾಯ­ಮೂರ್ತಿಗಳಾದ ಕೆ.ಎಸ್‌. ರಾಧಾ­ಕೃಷ್ಣನ್‌, ಎ.ಕೆ.ಸಿಕ್ರಿ ಅವರ ನ್ಯಾಯಪೀಠ ಈ ಸೂಚನೆ ನೀಡಿದೆ.

‘ಹಿಜಡಾ, ನಪುಂಸಕರು, ಅರ­ವಾನಿಸ್‌, ಜೋಗಪ್ಪ, ಶಿವಶಕ್ತಿ ಮತ್ತಿತರ  ಹೆಸರುಗಳಿಂದ ಕರೆಯುವ ಈ ವರ್ಗದ ಜನರು ಸಮಾಜದಲ್ಲಿ ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಪುರುಷರು ಮತ್ತು ಮಹಿಳೆಯರನ್ನು ಗೌರವದಿಂದ ಕಾಣುವಂತೆ ಈ ವರ್ಗದವರನ್ನೂ  ಕಾಣಬೇಕು. ಸಂವಿಧಾನ­ಬದ್ಧವಾಗಿ ದೇಶದ ನಾಗರಿಕರಿಗೆ ಇರುವ ಎಲ್ಲಾ ಹಕ್ಕುಗಳು ಅವರಿಗೂ ಇವೆ. ಅವುಗಳಿಗೆ ಧಕ್ಕೆಯಾಗದಂತೆ ಸರ್ಕಾರಗಳು ಮುತುವರ್ಜಿ ವಹಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಈ ವರ್ಗದವರ ರಕ್ಷಣೆಗಾಗಿ ಸಂವಿಧಾನದ ಮೂರನೇ ಭಾಗ ಹಾಗೂ ಸಂಸತ್‌ ಮತ್ತು ರಾಜ್ಯಗಳ ಶಾಸನ ಸಭೆಗಳ ವಿವಿಧ ಶಾಸನಗಳ ಅಡಿಯಲ್ಲಿ ಇವರಿಗೆ ‘ತೃತೀಯ ಲಿಂಗ’ದವರು ಎಂಬ ಮಾನ್ಯತೆ ನೀಡುತ್ತಿದ್ದೇವೆ’ ಎಂದು ಪೀಠ ಹೇಳಿದೆ.

‘ಲೈಂಗಿಕ ಅಲ್ಪಸಂಖ್ಯಾತರ’ ಕುರಿತು ಸಮಾಜದ ದೃಷ್ಟಿಕೋನ ಬದಲಾಗ­ಬೇಕು. ಅವರೂ ಗೌರವ, ಘನತೆಯ ಜೀವನ ನಡೆಸುವಂತಹ ಸನ್ನಿವೇಶ ದೊರಕಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯಗಳು ಅವರ ಹಕ್ಕುಗಳನ್ನು ಎತ್ತಿಹಿಡಿಯಬೇಕು’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT