ADVERTISEMENT

‘ಭಾರತ ಉತ್ತಮ ಬಾಂಧವ್ಯ ಬಯಸುತ್ತದೆ’

​ಪ್ರಜಾವಾಣಿ ವಾರ್ತೆ
Published 28 ಮೇ 2014, 10:27 IST
Last Updated 28 ಮೇ 2014, 10:27 IST

ನವದೆಹಲಿ (ಪಿಟಿಐ): ಪಾಕಿಸ್ತಾನದೊಂದಿಗೆ ಭಾರತ ‘ಉತ್ತಮ ’ ಸಂಬಂಧ ಬಯಸುತ್ತದೆ. ಆದರೆ ನೆರೆಯ ರಾಷ್ಟ್ರ ಭಯೋತ್ಪಾದನಾ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಬಾಂಬ್‌ ಸ್ಫೋಟಗಳ ‘ಸದ್ದಿ’ನಲ್ಲಿ ಮಾತುಕತೆಗಳು ‘ನಗಣ್ಯ’ವಾಗುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ನೂತನ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಬುಧವಾರ ಅಧಿಕಾರ ವಹಿಸಿಕೊಂಡು ಮಾತನಾಡಿದ  ಅವರು, ವಿಶ್ವಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವುದು ಹಾಗೂ ನೆರೆಯ ರಾಷ್ಟ್ರಗಳು, ರಕ್ಷಣಾ ಭಾಗಿದಾರರು, ಆಫ್ರಿಕಾ, ಏಷಿಯಾನ್‌ ಸದಸ್ಯ ರಾಷ್ಟ್ರಗಳು, ಯುರೋಪ್‌ ಹಾಗೂ ಇತರರೊಂದಿಗೆ ಸಂಬಂಧ ಸುಧಾರಿಸಲು ವಿದೇಶಾಂಗ ಸಚಿವೆಯಾಗಿ ಆದ್ಯತೆ ನೀಡುವುದಾಗಿ ತಿಳಿಸಿದರು.

ಪಾಕ್ ಪ್ರಧಾನಿ ನವಾಜ್ ಷರೀಫ್‌ ಅವರ ಭಾರತ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಸುಷ್ಮಾ, ‘ನಮಗೆ ಉತ್ತಮ ಸಂಬಂಧಗಳು ಬೇಕು ಎಂದು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ. ಭಯೋತ್ಪಾದನೆ ಚಟುವಟಿಕೆಗಳು (ಭಾರತ ವಿರುದ್ಧದ) ನಿಂತಲ್ಲಿ ಮಾತ್ರವೇ ಉತ್ತಮ ಸಂಬಂಧಕ್ಕಾಗಿ ನಡೆಸುವ ಮಾತುಕತೆ ಪರಿಣಾಮಕಾರಿ ಹಾಗೂ ಯಶಸ್ವಿಯಾಗಲು ಸಾಧ್ಯ’ ಎಂದರು.

ADVERTISEMENT

‘ಬಾಂಬ್‌ ಸ್ಫೋಟಗಳ ಸದ್ದಿನಲ್ಲಿ ಮಾತುಕತೆಯ ದನಿಗಳು ಕಳೆದು ಹೋಗುತ್ತವೆ. ನಾವು ಮಾತನಾಡಲು ಹಾಗೂ ನಮ್ಮ ದನಿಗಳನ್ನು ಕೇಳಲು ಬಾಂಬ್‌ ಸ್ಫೋಟಗಳನ್ನು ನಿಲ್ಲಿಸಬೇಕಿದೆ. ಬಾಂಬ್‌ ಸ್ಫೋಟಗಳ ಗದ್ದಲದಲ್ಲಿ ಮಾತುಕತೆಗಳು ದಮನವಾಗುತ್ತವೆ. ಇದನ್ನು ಮೋದಿ ಅವರು ಇಂತಹದ್ದೇ ಶಬ್ದಗಳಲ್ಲಿ ಷರೀಫ್‌ ಅವರಿಗೆ ತಿಳಿಸಿದ್ದಾರೆ’ ಎಂದೂ 62 ವರ್ಷದ ಸ್ವರಾಜ್‌ ತಿಳಿಸಿದರು.

ಅಲ್ಲದೇ,ಪಾಕಿಸ್ತಾನದಲ್ಲಿ ನಡೆಯುತ್ತಿರುವ 26/11ರ ಭಯೋತ್ಪಾದನಾ ದಾಳಿ ಪ್ರಕರಣದ ವಿಚಾರಣೆ ಚುರುಕುಗೊಳಿಸುವ ಬಗ್ಗೆ ಖಚಿತಪಡಿಸುವಂತೆಯೂ ಷರೀಫ್ ಅವರಿಗೆ ಭಾರತ ಕೇಳಿದೆ ಎಂದು ಸುಷ್ಮಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.