ADVERTISEMENT

2020ರ ವೇಳೆಗೆ ಚೀನಾ ಗಡಿಗೆ ರಸ್ತೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:35 IST
Last Updated 19 ಅಕ್ಟೋಬರ್ 2017, 19:35 IST
2020ರ ವೇಳೆಗೆ ಚೀನಾ ಗಡಿಗೆ ರಸ್ತೆ
2020ರ ವೇಳೆಗೆ ಚೀನಾ ಗಡಿಗೆ ರಸ್ತೆ   

ನವದೆಹಲಿ: ಭಾರತ–ಚೀನಾ ಗಡಿಯಲ್ಲಿನ ನಾಲ್ಕು ಪ್ರಮುಖ ಪಾಸ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ 2020ರ ಗಡುವು ವಿಧಿಸಿದೆ.

ಈಗಾಗಲೇ ಆರಂಭವಾಗಿರುವ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಿದೆ. ಈ ನಾಲ್ಕೂ ಪಾಸ್‌ಗಳು ಉತ್ತರಾಖಂಡದಲ್ಲಿದ್ದು, ಟಿಬೆಟ್‌ ಗಡಿಗೆ ಹೊಂದಿಕೊಂಡಿವೆ. ಮೂರು ವರ್ಷಗಳ ಒಳಗಾಗಿ ಈ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕೇಂದ್ರ, ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಗೆ (ಬಾರ್ಡರ್‌ ರೋಡ್ಸ್ ಆರ್ಗನೈಸೇಷನ್– ಬಿಆರ್‌ಒ) ಸೂಚನೆ ನೀಡಿದೆ.

ಸೋಮವಾರದಿಂದ ಆರಂಭವಾಗಿರುವ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಸಂಪರ್ಕ ರಸ್ತೆಗಳು ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲಿವೆ ಎಂದು ಭಾರತೀಯ ಸೇನೆಯ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿಜಯ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ಸುಮಾರು 4,000 ಕಿ.ಮೀ.ನಷ್ಟು ಉದ್ದದ ಭಾರತ–ಚೀನಾ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿಯೇ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ನಿಯೋಜನೆಯಲ್ಲಿರುವ ಸೇನಾ ತುಕಡಿಗಳ ಸಾಮರ್ಥ್ಯ ಹೆಚ್ಚಿಸುವ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ಚೀನಾವೂ ಗಡಿಯಲ್ಲಿ ರಸ್ತೆ ಮತ್ತು ಹೆದ್ದಾರಿಗಳನ್ನು ತ್ವರಿತಗತಿಯಲ್ಲಿ ನಿರ್ಮಿಸುತ್ತಿದೆ. ಹೀಗಾಗಿ ಭಾರತ ಕೂಡ ಗಡಿ ಪ್ರದೇಶಕ್ಕೆ ತ್ವರಿತಗತಿಯ ಸಂಪರ್ಕ ಕಲ್ಪಿಸಲು ಮತ್ತಷ್ಟು ರಸ್ತೆ ನಿರ್ಮಿಸಲು ಯೋಜನೆ ಸಿದ್ಧಪಡಿಸಿದೆ.ಇದಕ್ಕಾಗಿ ಬಿಆರ್‌ಒಗೆ ಹೆಚ್ಚುವರಿ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಾಗಿದೆ’ ಎಂದು ಮೂಲಗಳು ಹೇಳಿವೆ.

1. ತಾಂಗಾ ಲಾ ಪಾಸ್ 
ವಸತಿ ರಹಿತ ಪ್ರದೇಶವಾಗಿದ್ದರೂ ಈ ಪಾಸ್ ಯುದ್ಧದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿಂದ ಮೂರು ಕಿ.ಮೀ ಅಂತರದವರೆಗೂ ಚೀನಾ ಸುಸಜ್ಜಿತ ರಸ್ತೆ ಹೊಂದಿದೆ. ನಮ್ಮಲ್ಲಿ ಈ ಪಾಸ್‌ನಿಂದ 6 ಕಿ.ಮೀ ದೂರವಿರುವ ಫೂಲ್ ಸುಮ್ದಾವರೆಗೂ ಉತ್ತಮ ರಸ್ತೆಯಿದೆ. ಉಳಿದ 20 ಕಿ.ಮೀ ಅಂತರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. ಈ ಕಾಲುದಾರಿಯೂ ನಿಗದಿಯಾಗಿಲ್ಲ.

2. ತ್ಸಾಂಗ್‌ ಚೋಕ್ ಲಾ ಪಾಸ್
5,896 ಮೀಟರ್‌/ಸಮುದ್ರ ಮಟ್ಟದಿಂದ ಎತ್ತರ. ಇದು ಸೇನಾ ಸಿಬ್ಬಂದಿಗೆ ಮಾತ್ರ ಪ್ರವೇಶವಿರುವ ಪಾಸ್‌. ಈ ಪಾಸ್‌ನಿಂದ ನೈರುತ್ಯ ದಿಕ್ಕಿನಲ್ಲಿರುವ ತ್ಸಾಂಗ್‌ ಚೋಕ್ ಸೇನಾ ಶಿಬಿರದವರೆಗೂ ಉತ್ತಮ ರಸ್ತೆಯಿದೆ. ಇಲ್ಲಿಂದ ತ್ಸಾಂಗ್‌ ಚೋಕ್ ಪಾಸ್‌ವರೆಗಿನ 5 ಕಿ.ಮೀ. ಅಂತರವು ಅತ್ಯಂತ ದುರ್ಗಮವಾಗಿದ್ದು, ಕಾಲ್ನಡಿಗೆಯಲ್ಲಿ ಕ್ರಮಿಸಬೇಕು. ಆದರೆ ಚೀನಾ ಈ ಪಾಸ್‌ನಿಂದ 1 ಕಿ.ಮೀ ಅಂತರದವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಿದೆ.

3. ನಿತಿ ಪಾಸ್ 
5,800 ಮೀಟರ್/ ಸಮುದ್ರ ಮಟ್ಟದಿಂದ  ಎತ್ತರ. ಈ ಪಾಸ್‌ನ ಮೂಲಕ ಟಿಬೆಟ್ ಪ್ರವೇಶಿಸಬಹುದಾಗಿದೆ. ನಿತಿ ಪಾಸ್‌ನಿಂದ ಸುಮಾರು 100 ಕಿ.ಮೀ ದಕ್ಷಿಣಕ್ಕಿರುವ ಜೋಷಿಮಠದವರೆಗೂ ರಸ್ತೆಯಿದೆ. ಜೋಷಿ ಮಠದಿಂದ ಬಂಪಾ ಗ್ರಾಮದವರೆಗೂ ರಸ್ತೆ ಚೆನ್ನಾಗಿದೆ. ಅಲ್ಲಿಂದ ನಿತಿ ಗ್ರಾಮದವರೆಗೂ ರಸ್ತೆ ಚೆನ್ನಾಗಿದ್ದರೂ ಬೇಸಿಗೆಯಲ್ಲಿ ಮಾತ್ರ ಸಂಚಾರ ಸಾಧ್ಯ. ವರ್ಷದ ಬಹುತೇಕ ಕಾಲ ಈ ರಸ್ತೆ ಮುಚ್ಚಿರುತ್ತದೆ. ನಿತಿ ಗ್ರಾಮದ  ಜನರೂ ಮಳೆ ಮತ್ತು ಚಳಿಗಾಲದಲ್ಲಿ ದಕ್ಷಿಣದತ್ತ ವಲಸೆ ಬರುತ್ತಾರೆ ಮತ್ತು ಬೇಸಿಗೆಯಲ್ಲಿ ನಿತಿ ಗ್ರಾಮಕ್ಕೆ ಹಿಂತಿರುಗುತ್ತಾರೆ. ನಿತಿ ಗ್ರಾಮದಿಂದ ನಿತಿ ಪಾಸ್ 21 ಕಿ.ಮೀ ದೂರವಿದೆ. ಬಹುತೇಕ ನಿತಿ ಗ್ರಾಮದಿಂದ ಸುಮಾರು 10 ಕಿ.ಮೀ.ವರೆಗೂ ರಸ್ತೆಯಿದೆ. ಉಳಿದದ್ದು ಕಚ್ಚಾ ರಸ್ತೆ. ಇಲ್ಲಿಗೆ ಇಂಡೊ–ಟಿಬೆಟಿನ್ ಗಡಿ ಪೊಲೀಸ್ ಪಡೆ ಸಿಬ್ಬಂದಿ ಮಾತ್ರ ತಲುಪಲು ಅವಕಾಶವಿದೆ. ಪ್ರವಾಸಿಗರು ನಿತಿ ಗ್ರಾಮ ಪ್ರವೇಶಿಸಲೂ ಜೋಷಿಮಠದಲ್ಲಿಯೇ ಪೂರ್ವಾನುಮತಿ ಪಡೆಯಬೇಕು. ಆದರೆ, ಚೀನಾವು ನಿತಿ ಪಾಸ್‌ವರೆಗೂ ಸುಸಜ್ಜಿತ ರಸ್ತೆ ನಿರ್ಮಿಸಿದೆ.

4. ಲಿಪುಲೇಕ್ ಪಾಸ್ 
5,334 ಮೀಟರ್‌/ ಸಮುದ್ರ ಮಟ್ಟದಿಂದ ಎತ್ತರ. ಭಾರತ–ಚೀನಾ (ಟಿಬೆಟ್)–ನೇಪಾಳ ಗಡಿಯಲ್ಲಿದೆ. ಭಾರತದ ಅಧೀನದಲ್ಲಿದೆ. ಆದರೆ ಇದು ನಮ್ಮದು ಎಂಬುದು ನೇಪಾಳದ ವಾದ. ಕೈಲಾಸ– ಮಾನಸ ಸರೋವರ ಯಾತ್ರಾರ್ಥಿಗಳು ಈ ಮಾರ್ಗವನ್ನು ಬಳಸುತ್ತಾರೆ. ಭಾರತದಿಂದ ಈ ಯಾತ್ರಾ ಸ್ಥಳಗಳನ್ನು ತಲುಪಲು ಇರುವ ಹತ್ತಿರದ ಮತ್ತು ಅತ್ಯಂತ ದುರ್ಗಮ ಮಾರ್ಗವಿದು. ಸ್ಥಳೀಯ ವ್ಯಾಪಾರಿಗಳು ಟಿಬೆಟ್‌ ಜತೆ ವ್ಯಾಪರಕ್ಕಾಗಿ ಈ ಪಾಸ್‌ ಅನ್ನು ಬಳಸುತ್ತಾರೆ. ನೇಪಾಳದ ವ್ಯಾಪಾರಿಗಳೂ ಇದನ್ನು ಬಳಸುತ್ತಾರೆ. ಲಿಪುಲೇಕ್‌ನಿಂದ 76 ಕಿ.ಮೀನಷ್ಟು ದಕ್ಷಿಣಕ್ಕಿರುವ ಘಾಟಿಯಾಬಾಗ್‌ವರೆಗೂ ಉತ್ತಮ ರಸ್ತೆಯಿದೆ. ಘಾಟಿಯಾಬಾಗ್‌ನಿಂದ ಲಿಪುಲೇಕ್‌ವರೆಗಿನ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿಯನ್ನು ಬಿಆರ್‌ಒ ನಡೆಸುತ್ತಿದೆ. ಇದರಲ್ಲಿ 50 ಕಿ.ಮೀ.ನಷ್ಟು ರಸ್ತೆ ಸಿದ್ಧವಾಗಿದೆ. ಉಳಿದ 26 ಕಿ.ಮೀ ಅಂತರವನ್ನು ಅತ್ಯಂತ ಕಡಿದಾದ ಪರ್ವತವನ್ನು ಹಾದುಹೋಗಬೇಕು. ಈ ಭಾಗದಲ್ಲಿ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.