ADVERTISEMENT

3 ಆಯಾಮಗಳ ಮುದ್ರಣದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಯಾಮ

ಪಿಟಿಐ
Published 28 ಫೆಬ್ರುವರಿ 2017, 19:41 IST
Last Updated 28 ಫೆಬ್ರುವರಿ 2017, 19:41 IST
3 ಆಯಾಮಗಳ ಮುದ್ರಣದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಯಾಮ
3 ಆಯಾಮಗಳ ಮುದ್ರಣದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಯಾಮ   

ಮೂರು ಆಯಾಮಗಳ (3ಡಿ) ಮುದ್ರಣ ತಂತ್ರಜ್ಞಾನ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಗೆ ಕಾರಣವಾಗಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಇದು ವೈದ್ಯಕೀಯ ಕ್ಷೇತ್ರದ ಹಲವು ಪ್ರಯೋಗಗಳಿಗೂ ಪ್ರೇರಣೆ ನೀಡಿದೆ. ವೈದ್ಯಕೀಯ ಕ್ಷೇತ್ರಕ್ಕೆ ಮೂರು ಆಯಾಮಗಳ ಮುದ್ರಣ ಹೊಸ ಆಯಾಮವನ್ನೇ ನೀಡಲಿದೆ. ಭಾರತದಲ್ಲಿಯೂ 3ಡಿ ಮುದ್ರಣ ತಂತ್ರಜ್ಞಾನದ ಮೂಲಕ ದೇಹದ ಭಾಗಗಳನ್ನು ಮುದ್ರಿಸಿ ಅಳವಡಿಸುವ ಕೆಲಸಕ್ಕೆ ನಾಂದಿ ಹಾಡಲಾಗಿದೆ. ಇಂತಹ ಪ್ರಯತ್ನ ಗುಡಗಾಂವ್‌ನಲ್ಲಿ ಯಶಸ್ವಿಯಾಗಿದೆ.

32 ವರ್ಷ ವಯಸ್ಸಿನ ಶಿಕ್ಷಕಿಯೊಬ್ಬರಿಗೆ ಕ್ಷಯರೋಗದಿಂದಾಗಿ  ಕುತ್ತಿಗೆಯ ಭಾಗದಲ್ಲಿ ಬೆನ್ನುಹುರಿಯ ಎರಡು ಮೂಳೆಸಂಧಿಗಳು ಹಾನಿಯಾಗಿದ್ದವು. ಸಾಂಪ್ರದಾಯಿಕ ಶಸ್ತ್ರಕ್ರಿಯೆ ಮೂಲಕ ಅದನ್ನು ಸರಿಪಡಿಸಿದ್ದರೆ ಅವರು ಎದ್ದು ನಡೆಯಲು ಹಲವು ತಿಂಗಳುಗಳೇ ಬೇಕಿದ್ದವು. ಆದರೆ ನೋಯಿಡಾದ ಮೇದಾಂತ ಆಸ್ಪತ್ರೆಯ ಯುವ ವೈದ್ಯರ ತಂಡ ಶಿಕ್ಷಕಿಗೆ ಬೆನ್ನುಹುರಿಯ 3ಡಿ ಮುದ್ರಿತ ಮೂಳೆ ಜೋಡಿಸಿ ನಾಲ್ಕೇ ದಿನಗಳಲ್ಲಿ ಅವರು ನಡೆದಾಡುವಂತೆ ಮಾಡಿದೆ.

ಪ್ರಕ್ರಿಯೆ ಹೇಗೆ
- ಎಕ್ಸ್‌ರೇ ಮತ್ತು ಸ್ಪಷ್ಟವಾದ ಕ್ಯಾಟ್‌ ಸ್ಕ್ಯಾನ್‌ (ಸಿಟಿ ಸ್ಕ್ಯಾನ್‌)ಮೂಲಕ ಕಂಪ್ಯೂಟರ್‌ನಲ್ಲಿ ಹಾನಿಯಾದ ಅಂಗದ ಮೂರು ಆಯಾಮಗಳ ಮಾದರಿ ತಯಾರಿ
- ಹಾನಿಯಾದ ಅಂಗದ ಬದಲಿಗೆ ಬೇಕಾಗುವ ಅಂಗವನ್ನು ಕಂಪ್ಯೂಟರ್‌ನಲ್ಲಿ ವಿನ್ಯಾಸಗೊಳಿಸಲಾಗುತ್ತದೆ
- ಈ ವಿನ್ಯಾಸವನ್ನು 3ಡಿ ಮುದ್ರಣ ಯಂತ್ರಕ್ಕೆ ಕಳುಹಿಸಲಾಗುತ್ತದೆ
- ಲೇಸರ್‌ ಬಳಸಿ ಈ ಅಂಗವನ್ನು ಟೈಟಾನಿಯಂನಿಂದ ಪದರ ಪದರವಾಗಿ ಮುದ್ರಿಸಲಾಗುತ್ತದೆ

ADVERTISEMENT

ಮೂರನೇ ಪ್ರಯತ್ನ
- 2015ರಲ್ಲಿ ಚೀನಾ: 41 ವರ್ಷದ ಯುವಾನ್‌ ಎಂಬ ಕ್ಯಾನ್ಸರ್‌ ಪೀಡಿತ ವ್ಯಕ್ತಿಯ ಬೆನ್ನುಹುರಿಯ ಹಾನಿಗೊಂಡ ಐದು ಸಂಧಿಗಳ ಬದಲಿಗೆ 3ಡಿ ಮುದ್ರಿತ ಸಂಧಿಗಳನ್ನು ಅಳವಡಿಸಲಾಯಿತು. ಈ ಶಸ್ತ್ರಕ್ರಿಯೆಗೆ ಐದು ತಾಸು ಬೇಕಾಗಿತ್ತು.
- 2016ರಲ್ಲಿ ಆಸ್ಟ್ರೇಲಿಯಾ: ಡ್ರೇಗ್‌ ಜಾಸ್‌ವೆಸ್ಕಿ ಎಂಬವರಿಗೆ ಕ್ಯಾನ್ಸರ್‌ನಿಂದಾಗಿ ಬೆನ್ನುಹುರಿ ಸಂಧಿಗಳು ಹಾನಿಯಾಗಿದ್ದವು.  15 ತಾಸು ಶಸ್ತ್ರಕ್ರಿಯೆ ನಡೆಸಿ ಅವರಿಗೆ 3ಡಿ ಮುದ್ರಿತ ಸಂಧಿಗಳನ್ನು ಅಳವಡಿಸಲಾಗಿದೆ
- 2017ರಲ್ಲಿ ಭಾರತ


ಸೊಂಟದ ಸಂಧಿಗಳ 3ಡಿ ಮುದ್ರಿತ ಮಾದರಿ

ಟೈಟಾನಿಯಂ ಬಳಸಿ ಮುದ್ರಿಸಲಾದ ಪಕ್ಕೆಲುಬು ಗೂಡಿನ 3ಡಿ ಮಾದರಿ

3ಡಿ ಸಂಧಿ ಅಳವಡಿಸಿದ ನಂತರದ ಎಕ್ಸ್‌ರೇ

ಬೆನ್ನುಹುರಿಯ ಸಂಧಿಗೆ ಸಾಂಪ್ರದಾಯಿಕ ರೀತಿಯ ಟೈಟಾನಿಯಂ ನಾಳ

3ಡಿ ಮುದ್ರಿತ ಬೆನ್ನುಹುರಿ ಸಂಧಿ


ಬೆನ್ನುಹುರಿಯ ಮಾದರಿ

ಮೂತ್ರಕೋಶ ಮುದ್ರಣ ಸಾಧ್ಯವೇ?
ಜೀವಕೋಶಗಳನ್ನು ಬಳಸಿಕೊಂಡು ಪೂರ್ಣ ಅಂಗಗಳನ್ನು 3ಡಿ ತಂತ್ರಜ್ಞಾನದ ಮೂಲಕ ಮುದ್ರಿಸುವ ಮಹತ್ವಾಕಾಂಕ್ಷಿ ಪ್ರಯೋಗ ನಡೆಯುತ್ತಿದೆ. ಹಾನಿಯಾದ ಮೂತ್ರಕೋಶದ ಬದಲಿಗೆ ಹೊಸತೊಂದನ್ನು ಮುದ್ರಿಸಿ ಅಳವಡಿಸಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಇದು ಈಗ ಪ್ರಯೋಗದ ಹಂತದಲ್ಲಷ್ಟೇ ಇದೆ. ಕಾರ್ಯರೂಪಕ್ಕೆ ಬರಲು ಬಹಳ ಸಮಯ ಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.