ADVERTISEMENT

ತಮಿಳುನಾಡಿನಲ್ಲಿ ಬಿಸಿಗಾಳಿ ತೀವ್ರ: ಸರ್ಕಾರದಿಂದ ಮುಂಜಾಗ್ರತಾ ಕ್ರಮ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:33 IST
Last Updated 26 ಏಪ್ರಿಲ್ 2024, 15:33 IST
.
.   

ಚೆನ್ನೈ:  ತಮಿಳುನಾಡಿನ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಶುಕ್ರವಾರ 38ರಿಂದ 41 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು.

ಈ ಮಧ್ಯೆ ಇದೇ ರೀತಿಯ ವಾತಾವರಣ ಏಪ್ರಿಲ್‌ 30ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  ಉತ್ತರ ತಮಿಳುನಾಡಿನ ಹಲವೆಡೆ ಮೇ 1ರಿಂದ 4ರವರೆಗೆ ಬಿಸಿಗಾಳಿಯ ತೀವ್ರತೆ ಹೆಚ್ಚಿರಲಿದೆ  ಎಂದು ಕೆಲ ಸ್ವತಂತ್ರ ಹವಾಮಾನ ಮುನ್ಸೂಚನಾ ಸಂಸ್ಥೆಗಳು ಅಂದಾಜಿಸಿವೆ.

 ರಾಜ್ಯದ ವೆಲ್ಲೂರು ಮತ್ತು ಕರೂರಿನಲ್ಲಿ ಶುಕ್ರವಾರ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್‌  ಉಷ್ಣಾಂಶ ದಾಖಲಾಗಿತ್ತು. ಮಧುರೈನಲ್ಲಿ 39 ಡಿಗ್ರಿ ಸೆಲ್ಸಿಯಸ್‌, ಧರ್ಮಪುರಿಯಲ್ಲಿ 38 ಡಿಗ್ರಿ ಸೆಲ್ಸಿಯಸ್‌ , ಚೆನ್ನೈನಲ್ಲಿ 36 ಡಿಗ್ರಿ ಸೆಲ್ಸಿಯಸ್‌ ಮತ್ತು ತೂತುಕುಡಿಯಲ್ಲಿ ‌33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ  ದಾಖಲಾಗಿತ್ತು.

ADVERTISEMENT

ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಶಿವ ದಾಸ್‌ ಮೀನಾ ಅವರು ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿ ಪಡೆದರು.  ಮುಂಬರುವ ದಿನಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಇಲಾಖೆಯ ಸಿದ್ಧತೆ ಕುರಿತು ಮಾಹಿತಿ ಪಡೆದರು.

ಇದಕ್ಕೂ ಮುನ್ನ ಗುರುವಾರ ಮುಖ್ಯಮಂತ್ರಿ ಸ್ಟಾಲಿನ್‌ ಅವರು ಬಿಸಿಗಾಳಿಯನ್ನು ಎದುರಿಸಲು ಮುಂಜಾಗೃತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ರಾಜ್ಯದ  1,000 ಕಡೆಗಳಲ್ಲಿ ನೀರು ಸರಬರಾಜು ಕೇಂದ್ರ ಸ್ಥಾಪನೆ ಮತ್ತು ಒಆರ್‌ಎಸ್‌ ಪ್ಯಾಕೆಟ್‌ ವಿತರಿಸುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.