ADVERTISEMENT

ಕೇಜ್ರಿವಾಲ್‌ಗೆ ಗೆಲುವು

ಲೆಫ್ಟಿನೆಂಟ್‌ ಗವರ್ನರ್‌ಗೆ ಸ್ವತಂತ್ರ ಅಧಿಕಾರ ಇಲ್ಲ: ಸುಪ್ರೀಂ

ಪಿಟಿಐ
Published 4 ಜುಲೈ 2018, 19:26 IST
Last Updated 4 ಜುಲೈ 2018, 19:26 IST
   

ನವದೆಹಲಿ: ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌.ಜಿ) ಅನಿಲ್‌ ಬೈಜಾಲ್‌ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಡುವೆ ಅಧಿಕಾರಕ್ಕಾಗಿ ನಡೆದ ಕಾನೂನು ಸಂಘರ್ಷದಲ್ಲಿ ಕೇಜ್ರಿವಾಲ್‌ಗೆ ಗೆಲುವಾಗಿದೆ. ನಿರ್ಧಾರ ಕೈಗೊಳ್ಳುವ ಯಾವುದೇ ಸ್ವತಂತ್ರ ಅಧಿಕಾರಎಲ್‌.ಜಿಗೆ ಇಲ್ಲ ಮತ್ತು ಚುನಾಯಿತ ಸರ್ಕಾರದ ಸಲಹೆಗೆ ಅವರು ಬದ್ಧರಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ನಿರಂಕುಶಾಧಿಕಾರಕ್ಕೆ ಅವಕಾಶವಿಲ್ಲ, ಹಾಗೆಯೇ ಅರಾಜಕತೆಗೂ ಅವಕಾಶ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿದೆ. ಕೇಂದ್ರ ಸರ್ಕಾರವು ನೇಮಕ ಮಾಡುವ ಲೆಫ್ಟಿನೆಂಟ್‌ ಗವರ್ನರ್‌ ಒಂದು ತೊಡಕಿನಂತೆ ವರ್ತಿಸಬಾರದು ಎಂದೂ ಪೀಠ ಹೇಳಿದೆ.

ಬೈಜಾಲ್‌ ಅವರು ಕೇಂದ್ರದ ಕುಮ್ಮಕ್ಕಿನಂತೆ ತಮ್ಮ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದ್ದಾರೆ ಎಂದು ಕೇಜ್ರಿವಾಲ್‌ ಅವರು ಬಹಳ ಹಿಂದಿನಿಂದಲೇ ಆರೋಪಿಸುತ್ತಾ ಬಂದಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಅವರ ವಾದಕ್ಕೆ ಸಮರ್ಥನೆ ದೊರೆತಂತಾಗಿದೆ.

ADVERTISEMENT

ಎಲ್‌.ಜಿ ನಡವಳಿಕೆ ಹೇಗಿರಬೇಕು ಎಂಬ ಸ್ಪಷ್ಟ ಮಾರ್ಗದರ್ಶಿ ಸೂತ್ರವನ್ನು ಸುಪ್ರೀಂ ಕೋರ್ಟ್‌ ಇದೇ ಮೊದಲ ಬಾರಿಗೆ ರೂಪಿಸಿದೆ. ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಇಲ್ಲದಿರುವುದರಿಂದ ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಇರುವ ಎರಡು ಆಡಳಿತ ವಿಭಾಗಗಳ ಅಧಿಕಾರಗಳು ಏನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ.

**

ದೆಹಲಿಯ ಜನರಿಗೆ ದೊರೆತ ದೊಡ್ಡ ವಿಜಯ ಇದು. ಪ್ರಜಾಪ್ರಭುತ್ವದ ಬಹುದೊಡ್ಡ ಗೆಲುವು ಇದು.

-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.