ADVERTISEMENT

ಹತ್ಯೆ ಆರೋಪದಲ್ಲಿ ಶಿಕ್ಷೆಗೊಳಗಾದವರಿಗೆ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಸನ್ಮಾನ!

ವಿಡಿಯೊ ಬಹಿರಂಗ

ಏಜೆನ್ಸೀಸ್
Published 7 ಜುಲೈ 2018, 11:13 IST
Last Updated 7 ಜುಲೈ 2018, 11:13 IST
ಜಯಂತ್‌ ಸಿನ್ಹಾ (ಸಂಗ್ರಹ ಚಿತ್ರ)
ಜಯಂತ್‌ ಸಿನ್ಹಾ (ಸಂಗ್ರಹ ಚಿತ್ರ)   

ರಾಂಚಿ: ಹತ್ಯೆ ಆರೋಪದಲ್ಲಿ ಶಿಕ್ಷೆಗೊಳಗಾಗಿರುವ ವ್ಯಕ್ತಿಗಳಿಗೆ ನಾಗರಿಕ ವಿಮಾನಯಾನ ಸಚಿವ ಜಯಂತ್‌ ಸಿನ್ಹಾ ಸನ್ಮಾನ ಮಾಡಿರುವ ವಿಡಿಯೊ ಬಹಿರಂಗವಾಗಿದೆ. ಸಚಿವರ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಗೋಮಾಂಸ ಸಾಗಿಸಿದ್ದಾರೆ ಎಂಬ ಅನುಮಾನದಲ್ಲಿ ಕಳೆದ ವರ್ಷ ಜೂನ್ 29ರಂದು ಜಾರ್ಖಂಡ್‌ನ ರಾಮಗಡದಲ್ಲಿ ಅಲಿಮುದ್ದೀನ್ ಅನ್ಸಾರಿ ಎಂಬ ವ್ಯಾಪಾರಿಯನ್ನು ಗುಂಪೊಂದು ಹತ್ಯೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದ 11 ಆರೋಪಿಗಳ ಪೈಕಿ 8 ಮಂದಿಯನ್ನು ದೋಷಿಗಳು ಎಂದು ಪರಿಗಣಿಸಿದ್ದ ರಾಮಗಡ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅವರು ಜಾರ್ಖಂಡ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿತ್ತು.

ಕೊಲೆ ಪ್ರಕರಣದ ಅಪರಾಧಿಗಳಿಗೆ ಸಚಿವರು ಸನ್ಮಾನ ಮಾಡಿದ್ದಾರೆ ಎನ್ನಲಾದ ವಿಡಿಯೊವನ್ನು ಎನ್‌ಡಿಟಿವಿ ಪ್ರಸಾರ ಮಾಡಿದೆ.

ಟೈಮ್ಸ್‌ನೌ ಸುದ್ದಿವಾಹಿನಿ ಸಹ ವಿಡಿಯೊ ಪ್ರಸಾರ ಮಾಡಿದ್ದು, ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದೆ.

ಇದೇ ಮೊದಲಲ್ಲ: ಜಯಂತ್ ಸಿನ್ಹಾ ಅವರು ಈ ಹಿಂದೆಯೂ ಅಪರಾಧಿಗಳ ಪರ ವಹಿಸಿ ಮಾತನಾಡಿದ್ದಾರೆ. ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಸಚಿವರು, ಕಾನೂನು ಹೋರಾಟಕ್ಕಾಗಿ ಅವರಿಗೆ (ತಪ್ಪಿತಸ್ಥರಿಗೆ) ಉತ್ತಮ ವಕೀಲರನ್ನು ನೇಮಿಸಬೇಕು ಎಂದಿದ್ದರು ಎಂಬುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ವ್ಯಾಪಕ ಖಂಡನೆ: ಜಯಂತ್‌ ಸಿನ್ಹಾ ಕ್ರಮವನ್ನು ಜಾರ್ಖಂಡ್ ಮುಕ್ತಿ ಮೋರ್ಚಾದ ಕಾರ್ಯನಿರ್ವಹಣಾ ಅಧ್ಯಕ್ಷ ಹೇಮಂತ್ ಸೊರೇನ್ ಖಂಡಿಸಿದ್ದಾರೆ.

ಕೇಂದ್ರದ ಸಚಿವರಾಗಿ ಈ ರೀತಿ ನಡೆದುಕೊಂಡಿರುವುದು ನಾಚಿಕೆಗೇಡು ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಸುಖ್‌ದಿಯೊ ಭಗತ್ ಹೇಳಿದ್ದಾರೆ.

ಈ ಕುರಿತು ಜಯಂತ್‌ ಸಿನ್ಹಾ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.