ADVERTISEMENT

ಅಂಗಾಂಗ ದಾನ:ವೆಬ್‌ಸೈಟ್‌ನಲ್ಲೇ ಮಾಹಿತಿ

ರೋಗಿಗಳಿಗೆ ತಪ್ಪಲಿದೆ ಅಲೆದಾಟ

ಎನ್.ನವೀನ್ ಕುಮಾರ್
Published 1 ಜುಲೈ 2016, 22:30 IST
Last Updated 1 ಜುಲೈ 2016, 22:30 IST
ಅಂಗಾಂಗ ದಾನ:ವೆಬ್‌ಸೈಟ್‌ನಲ್ಲೇ ಮಾಹಿತಿ
ಅಂಗಾಂಗ ದಾನ:ವೆಬ್‌ಸೈಟ್‌ನಲ್ಲೇ ಮಾಹಿತಿ   

ಬೆಂಗಳೂರು: ಅಂಗಾಂಗ ದಾನ ಪಡೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸುವ ರೋಗಿಗಳು ಇನ್ನು ಮುಂದೆ ಬೆಂಗಳೂರಿಗೆ ಅಲೆದಾಡಬೇಕಿಲ್ಲ. ತಾವಿದ್ದಲ್ಲೇ ವೆಬ್‌ಸೈಟ್‌ ಮೂಲಕ ಅರ್ಜಿ ಪ್ರಕ್ರಿಯೆಯ ಪ್ರತಿ ಹಂತದ ವಿವರಗಳನ್ನು ಪಡೆಯಬಹುದು.

ಅಂಗಾಂಗ ದಾನ ಪಡೆಯಲು ಅನುಮತಿ ಸಿಕ್ಕಿದೆಯೇ? ಅಥವಾ ತಿರಸ್ಕೃತಗೊಂಡಿದೆಯೇ? ಅರ್ಜಿ ಪ್ರಕ್ರಿಯೆ ಯಾವ ಹಂತದಲ್ಲಿದೆ? ಎಂಬ ಮಾಹಿತಿ ಸುಲಭವಾಗಿ ತಿಳಿಯುತ್ತಿರಲಿಲ್ಲ. ಭ್ರಷ್ಟಾಚಾರ ತಡೆಗಟ್ಟುವುದು ಹಾಗೂ ಪಾರದರ್ಶಕತೆ ತರುವ ಉದ್ದೇಶದಿಂದ ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೋ– ಯುರಾಲಜಿ ಸಂಸ್ಥೆಯು ‘ರಾಜ್ಯಮಟ್ಟದ ಮಾನವ ಅಂಗಾಂಗ ಕಸಿ ಜೋಡಣೆ ಅಧಿಕಾರಯುಕ್ತ ಸಮಿತಿ’ಗೆಂದೇ www.sachot.org.in ಎಂಬ ವೆಬ್‌ಸೈಟನ್ನು ರೂಪಿಸಿದೆ.

ರೋಗಿಗಳು ಅರ್ಜಿ ಸಲ್ಲಿಸಿದ ತಕ್ಷಣ ಅವರಿಗೆ ವಿಶಿಷ್ಟ ಐಡಿಯನ್ನು ನೀಡಲಾಗುತ್ತದೆ. ಅದನ್ನು ವೆಬ್‌ಸೈಟ್‌ ನಲ್ಲಿ ನಮೂದಿಸಿದ ತಕ್ಷಣ ರೋಗಿಗಳ ಮೊಬೈಲ್‌ಗೆ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ನಂಬರ್‌ ರವಾನೆಯಾಗುತ್ತದೆ. ಈ ಪಾಸ್‌ವರ್ಡ್‌ ನಮೂದಿಸಿ ತಮ್ಮ ಅರ್ಜಿಯ ವಿವರಗಳನ್ನು ನೋಡಬಹುದು.

ಅಂಗಾಂಗ ಜೋಡಣೆಗೆ ಅನುಮತಿ ನೀಡುವ ಸಂಬಂಧ ಸಮಿತಿಯ ಸದಸ್ಯರು ಸಭೆ ನಡೆಸುತ್ತಾರೆ. ಈ ಸಭೆಯ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.  ಜತೆಗೆ ರೋಗಿಗಳ ವಿಳಾಸಕ್ಕೂ ಪತ್ರವನ್ನು ರವಾನಿಸಲಾಗುತ್ತದೆ. ಅಂದು ರೋಗಿಗಳು ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ.
ಅಲ್ಲದೆ, ಅಂಗಾಂಗ ಕಸಿಗೆ ಸಂಬಂಧಿಸಿದ ಅರ್ಜಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅಗತ್ಯವಿರುವವರು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

‘ಪ್ರತಿ ತಿಂಗಳು 20–25 ಅರ್ಜಿಗಳು ಸಲ್ಲಿಕೆಯಾಗುತ್ತವೆ.  ಅರ್ಜಿ ಸಲ್ಲಿಸಿದವರಿಗೆ ಫೋನ್‌ ಮಾಡಿ ಮಾಹಿತಿ ನೀಡಬೇಕಿತ್ತು. ಅಲ್ಲದೆ, ಸೂಕ್ತ ಮಾಹಿತಿ ಇಲ್ಲದೆ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ವೆಬ್‌ಸೈಟ್‌ ರೂಪಿಸಲಾಗಿದೆ’ ಎಂದು ನೆಫ್ರೋ– ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಆರ್‌.ಕೇಶವಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗಾಂಗ ದಾನ ಪ್ರಕರಣಗಳಲ್ಲಿ ಹಣಕಾಸು ವಹಿವಾಟು ನಡೆಯುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ದಾನಿಗಳು ಹಾಗೂ ರೋಗಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಈ ದಾಖಲೆಗಳನ್ನು ಸಂಬಂಧಪಟ್ಟ ಪೊಲೀಸ್‌ ಆಯುಕ್ತರಿಗೆ ಕಳುಹಿಸಲಾಗುತ್ತದೆ. ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ಕಳುಹಿಸುತ್ತಾರೆ. ಸ್ಥಳೀಯ ಪೊಲೀಸರು ಪರಿಶೀಲಿಸಿ ಹಣಕಾಸು ವಹಿವಾಟು ನಡೆದಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ನೀಡುತ್ತಾರೆ. ಬಳಿಕ ಸಮಿತಿಯ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡಲಾಗುತ್ತದೆ’ ಎಂದರು.

‘ಮುಂದಿನ ವಾರ ವೆಬ್‌ಸೈಟ್‌ಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರನ್ನು ಉದ್ಘಾಟನೆಗೆ ಆಹ್ವಾನಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಕಾರ್ಯವಿಧಾನ
ಕಿಡ್ನಿ, ಯಕೃತ್‌, ಹೃದಯ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡುವ ಮತ್ತು ಅಂಗಾಂಗ ಜೋಡಣೆಗೆ ಒಳಗಾಗುವ ವ್ಯಕ್ತಿ ಅಥವಾ ಕುಟುಂಬಗಳ ಜತೆ ಸಮಾಲೋಚನೆ ನಡೆಸಿ, ಅದಕ್ಕೆ ಒಪ್ಪಿಗೆ ನೀಡುವ ಜವಾಬ್ದಾರಿಯನ್ನು ನೆಫ್ರೊ- ಯುರಾಲಜಿ ಸಂಸ್ಥೆಯ ‘ರಾಜ್ಯಮಟ್ಟದ ಮಾನವ ಅಂಗಾಂಗ ಕಸಿ ಜೋಡಣೆ ಅಧಿಕಾರಯುಕ್ತ ಸಮಿತಿ’ಗೆ  ವಹಿಸಲಾಗಿದೆ.

ಈ ಸಮಿತಿಯು ಪ್ರತಿ ಶನಿವಾರ ಸಭೆ ನಡೆಸಿ ರೋಗಿಗಳ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುತ್ತದೆ. ಅರ್ಜಿಗಳು ಬರುತ್ತಿದ್ದಂತೆ ದಾಖಲೆಗಳನ್ನು ಪರಿ­ಶೀಲಿಸಿ ಯಾವುದೇ ರೀತಿಯ ತೊಡಕು ಇಲ್ಲದಿದ್ದರೆ ಒಂದು ವಾರ­ದಲ್ಲೇ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುತ್ತದೆ. ಒಂದು ವೇಳೆ ಕಾನೂನಿನ ತೊಡಕಿದ್ದು, ದಾಖಲಾತಿಗಳು ಸರಿಯಾಗಿ ಇಲ್ಲದಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT