ADVERTISEMENT

ಅಧಿಕಾರಿಗಳ ಮೇಲೆ ಲಾರಿ ಹರಿಸಲು ಯತ್ನ: ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 18:23 IST
Last Updated 8 ಏಪ್ರಿಲ್ 2017, 18:23 IST
ಅಧಿಕಾರಿಗಳ ಮೇಲೆ ಲಾರಿ ಹರಿಸಲು ಯತ್ನ: ಮೂವರ ಸೆರೆ
ಅಧಿಕಾರಿಗಳ ಮೇಲೆ ಲಾರಿ ಹರಿಸಲು ಯತ್ನ: ಮೂವರ ಸೆರೆ   

ದಾವಣಗೆರೆ: ತಾಲ್ಲೂಕಿನ ಹಳೆಬಾತಿ ಸಮೀಪದ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿರುವ ಮಾಹಿತಿ ಮೇರೆಗೆ ಶನಿವಾರ ದಾಳಿಗೆ ಮುಂದಾದ ಅಧಿಕಾರಿಗಳ ಮೇಲೆಯೇ ದುಷ್ಕರ್ಮಿಗಳು ಲಾರಿ ಹತ್ತಿಸಲು ಯತ್ನಿಸಿದ್ದಾರೆ.

ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷ್‌ ಕುಮಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಆರೋಪಿಗಳು ಸುತ್ತುವರಿದು ಜೀವ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದರು. ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಿ, ಅಕ್ಕಿ ತುಂಬಿ ನಿಲ್ಲಿಸಿದ್ದ ಒಂದು ಲಾರಿಯನ್ನು  ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಘಟನೆ ಸಂಬಂಧ ಪ್ರಶಾಂತ್‌, ಕಿರಣ್‌ ನಾಯಕ್‌ ಹಾಗೂ ಉಮಾಪತಿ ಎಂಬು  ವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಅವರ ವಿರುದ್ಧ ಕೊಲೆ ಯತ್ನ, ಹಲ್ಲೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಗೋದಾಮಿನಲ್ಲಿ ಪಡಿತರ ಅಕ್ಕಿ ತುಂಬಿಸಿ ನಿಲ್ಲಿಸಿದ್ದ ಒಂದು ಲಾರಿ ಹಾಗೂ ಟ್ರ್ಯಾಕ್ಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಳೇದ ತಿಳಿಸಿದರು.

ADVERTISEMENT

ಪ್ರಹಸನ: ‘ಆರೋಪಿಗಳು ಅನ್ನಭಾಗ್ಯ ಅಕ್ಕಿಯನ್ನು ಪಾಲಿಷ್‌ ಮಾಡಿಸಿ, ತಮ್ಮದೇ ಬ್ರಾಂಡ್‌ನಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿ ಅಧಿಕಾರಿಗಳು ದಾಳಿ ನಡೆಸಿದಾಗ, ಅಧಿಕಾರಿಗಳೇ ಹಣ ವಸೂಲಿಗೆ ಬಂದಿದ್ದರು ಎಂಬ ರೀತಿ ಪ್ರಹಸನ ನಡೆಸಿ ವಿಡಿಯೊ ಚಿತ್ರೀಕರಣ ನಡೆಸಿದರು. ಆದರೆ, ವಾಸ್ತವವಾಗಿ ನಡೆದ ಘಟನೆಯ ಸಂಪೂರ್ಣ ವಿಡಿಯೊ ದೃಶ್ಯಗಳು ಲಭ್ಯವಾಗಿವೆ’ ಎಂದು
ಎಸ್‌.ಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.