ADVERTISEMENT

ಅಧ್ಯಕ್ಷರ ಪದಚ್ಯುತಿ ದುರದೃಷ್ಟಕರ: ನಾಗನೂರು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ಅಧ್ಯಕ್ಷರ ಪದಚ್ಯುತಿ ದುರದೃಷ್ಟಕರ: ನಾಗನೂರು ಸ್ವಾಮೀಜಿ
ಅಧ್ಯಕ್ಷರ ಪದಚ್ಯುತಿ ದುರದೃಷ್ಟಕರ: ನಾಗನೂರು ಸ್ವಾಮೀಜಿ   

ಬೆಳಗಾವಿ: ‘ಜಿಲ್ಲಾ ಘಟಕದ ಚುನಾಯಿತ ಸದಸ್ಯರನ್ನು ಪದಚ್ಯುತಗೊಳಿಸಿ, ಹಂಗಾಮಿ ಅಧ್ಯಕ್ಷರನ್ನು ನೇಮಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಕ್ರಮವು ದುರದೃಷ್ಟಕರ’ ಎಂದು ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.

‘ಮಹಾಸಭಾದ ಜಿಲ್ಲಾ ಘಟಕದ ಚುನಾಯಿತ ಅಧ್ಯಕ್ಷ ಶಂಕರಣ್ಣ ವಿಜಾಪುರ ಹಾಗೂ ಇತರ ಪದಾಧಿಕಾರಿಗಳನ್ನು ಪದಚ್ಯುತಗೊಳಿಸಿರುವ ಸಮಿತಿಯು, ವೈ.ಎಸ್. ಪಾಟೀಲ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿದಂತಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮಹಾಸಭೆಯ ಜಿಲ್ಲಾ ಘಟಕದ ಎಲ್ಲ ಸೊತ್ತು ಸದಸ್ಯರು ಹಾಗೂ ಸ್ಥಳೀಯರದ್ದಾಗಿದೆ. ಆದರೆ, ಇವರ ಜೊತೆ ಚರ್ಚಿಸದೆ, ವಿಚಾರ– ವಿಮರ್ಶೆ ಮಾಡದೆ ಏಕಾಏಕಿ ಪದಚ್ಯುತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ದೂರಿದ್ದಾರೆ.

ADVERTISEMENT

‘ಶಾಮನೂರು ಶಿವಶಂಕರಪ್ಪ, ಎನ್. ತಿಪ್ಪಣ್ಣ ಅವರಂತಹ ವಿವೇಚನಾಶೀಲ ಹಿರಿಯರು ಇದ್ದಾಗಲೂ ಕೇಂದ್ರ ಸಮಿತಿಯಿಂದ ಇಂತಹ ತೀರ್ಮಾನ ಹೊರಬಂದಿರುವುದು ಆಘಾತಕಾರಿ’ ಎಂದು ಹೇಳಿದ್ದಾರೆ.

‘ಜಿಲ್ಲಾ ಘಟಕವನ್ನು ನಿಷ್ಕ್ರಿಯಗೊಳಿಸುತ್ತಿರುವುದು ಬೆಳಗಾವಿ ಜಿಲ್ಲೆಯ ಸಮಾಜ ಬಾಂಧವರಲ್ಲಿ ತಳಮಳ ಉಂಟು ಮಾಡಿದೆ. ಜಿಲ್ಲಾ ಘಟಕದ ವ್ಯವಹಾರದಲ್ಲಿ ಮೂಗು ತೂರಿಸುವುದನ್ನು ಬಿಟ್ಟು ತನ್ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ’ಎಂದು ಅವರು ಕೇಂದ್ರ ಸಮಿತಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.