ADVERTISEMENT

‘ಅನುಕಂಪ’ದ ನಡುವೆ ‘ಸ್ವಾಭಿಮಾನ’ ಅರಳುವುದೆ?

ಕೆ.ಜೆ.ಮರಿಯಪ್ಪ
Published 5 ಏಪ್ರಿಲ್ 2017, 20:40 IST
Last Updated 5 ಏಪ್ರಿಲ್ 2017, 20:40 IST
‘ಅನುಕಂಪ’ದ ನಡುವೆ ‘ಸ್ವಾಭಿಮಾನ’ ಅರಳುವುದೆ?
‘ಅನುಕಂಪ’ದ ನಡುವೆ ‘ಸ್ವಾಭಿಮಾನ’ ಅರಳುವುದೆ?   

ಮೈಸೂರು: ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆ ಅನಿವಾರ್ಯವಾಗಿ ಬಂದಿರುವ ನಂಜನಗೂಡು ಉಪ ಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಇಲ್ಲಿ ‘ಸ್ವಾಭಿಮಾನ– ಅನುಕಂಪ’ದ ವಿಚಾರ ಮುನ್ನಲೆಗೆ ಬಂದಿದೆ.

ಸಚಿವ ಸ್ಥಾನದಿಂದ ಕೈಬಿಟ್ಟಿದ್ದರಿಂದ ಸಿಟ್ಟಿಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿ.ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಈವರೆಗೆ ಜೆಡಿಎಸ್‌ನಿಂದ ಚುನಾವಣೆ ಎದುರಿಸುತ್ತಾ ಬಂದಿದ್ದ ಕಳಲೆ ಕೇಶವಮೂರ್ತಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. 2013ರ ಚುನಾವಣೆಯಲ್ಲಿ ಇಬ್ಬರೂ ಎದುರು ಬದುರಾಗಿದ್ದರು. ಈ ಸಲ ಪಕ್ಷ ಬದಲಾಗಿದೆ. ಆದರೆ, ಅದೇ ಸ್ಪರ್ಧಿಗಳು ಮತ್ತೊಮ್ಮೆ ತೊಡೆ ತಟ್ಟಿದ್ದಾರೆ. 11 ಮಂದಿ ಕಣದಲ್ಲಿ ಇದ್ದರೂ ಈ ಇಬ್ಬರ ನಡುವೆಯೇ ಹಣಾಹಣಿ. ಜೆಡಿಎಸ್ ಸ್ಪರ್ಧೆಯಲ್ಲಿಲ್ಲ.

ಉಪ ಚುನಾವಣೆಯು ಶ್ರೀನಿವಾಸ ಪ್ರಸಾದ್– ಕೇಶವಮೂರ್ತಿ ನಡುವಿನ ಸ್ಪರ್ಧೆಯಾಗಿ ಉಳಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಹೋರಾಟದ ಕಣವಾಗಿ ಮಾರ್ಪಟ್ಟಿದೆ.

ADVERTISEMENT

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವುದರಿಂದ ಎರಡೂ ಪಕ್ಷಗಳಿಗೆ ಗೆಲುವು ಅನಿವಾರ್ಯವಾಗಿದ್ದು, ‘ಪ್ರತಿಷ್ಠೆ’ ಪ್ರಶ್ನೆಯಾಗಿದೆ. ಶತಾಯಗತಾಯ ಗೆಲ್ಲಲೇಬೇಕು ಎಂದು ನಾಯಕರು ಬೆವರು ಹರಿಸುತ್ತಿದ್ದಾರೆ.

ಸ್ವಾಭಿಮಾನ– ಅನುಕಂಪ:  ಈ ಎರಡು ವಿಚಾರಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ‘ನನ್ನನ್ನು ಸಚಿವ ಸ್ಥಾನದಿಂದ ಕಿತ್ತುಹಾಕಿ ದಲಿತರ ಸ್ವಾಭಿಮಾನವನ್ನು ಸಿದ್ದರಾಮಯ್ಯ ಕೆಣಕಿದ್ದಾರೆ. ಚುನಾವಣೆಯಲ್ಲಿ ದಲಿತರ ಸ್ವಾಭಿಮಾನ ಉಳಿಯಬೇಕು’ ಎಂದು ಪ್ರಸಾದ್ ಪ್ರಮುಖವಾಗಿ ಪ್ರಚಾರ ನಡೆಸಿದ್ದಾರೆ. ಸತತವಾಗಿ ಎರಡು ಬಾರಿ ಸೋಲು ಕಂಡಿರುವ ಕೇಶವಮೂರ್ತಿ ಅನುಕಂಪವನ್ನು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ. ‘ಒಂದು ಸಲ ನನಗೂ ಅವಕಾಶ ಕೊಡಿ’ ಎಂದು ಕೈಮುಗಿಯುತ್ತಿದ್ದಾರೆ.

ಜಾತಿ ಸಮೀಕರಣ:  ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರಗಳಿಗಿಂತ ಜಾತಿ ಆಧಾರದ ಮೇಲೆ ಮತಗಳನ್ನು ಸೆಳೆಯುವ ಪ್ರಯತ್ನ ನಡೆದಿದೆ. ಜಾತಿ ಸಮೀಕರಣದ ಮೇಲೆ ಗೆಲುವಿನ ಲೆಕ್ಕಾಚಾರ ಹಾಕಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇದೇ ತಂತ್ರದ ಮೇಲೆ ಪ್ರಚಾರದ ರೂಪರೇಷೆ ಹೆಣೆದಿವೆ. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ಆಯಾ ಸಮುದಾಯದ ಸಚಿವರನ್ನು ಕರೆತಂದು ತಮ್ಮ ತಮ್ಮ ಸಮುದಾಯದ ಜನರ ನಡುವೆ ಪ್ರಚಾರ ನಡೆಸಿದ್ದಾರೆ. ಅದೇ ಮಾದರಿಯಲ್ಲಿ ಯಡಿಯೂರಪ್ಪ ಅವರೂ ಸಾಗಿದ್ದಾರೆ. ಯಾವ ಸಮುದಾಯದವರು ಹೆಚ್ಚಿದ್ದಾರೆ, ಅಲ್ಲಿಗೆ ಅದೇ ಸಮುದಾಯದ ಮುಖಂಡರನ್ನು ಪ್ರಚಾರಕ್ಕೆ ಇಳಿಸಿದ್ದಾರೆ.

ಕ್ಷೇತ್ರದಲ್ಲಿರುವ ಬಹುಸಂಖ್ಯಾತ ಲಿಂಗಾಯತ ಹಾಗೂ ದಲಿತರ ಮತಗಳು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಯಡಿಯೂರಪ್ಪ ತಮ್ಮ ಸಮುದಾಯದ ಲಿಂಗಾಯತರ ಮತಗಳನ್ನು ಒಟ್ಟುಗೂಡಿಸುವಲ್ಲಿ ತೊಡಗಿದ್ದಾರೆ. ಬದನವಾಳು ಘಟನೆಯ ಕಹಿ ನೆನಪುಗಳನ್ನು ಮರೆತು ‘ನನ್ನನ್ನು ನೋಡಿ ಪ್ರಸಾದ್‌ಗೆ ಓಟು ಕೊಡಿ’ ಎಂದು ಕೇಳುತ್ತಿದ್ದಾರೆ. ಇದು ಫಲಿಸಿದರೆ ಪ್ರಸಾದ್ ಅವರ ಮತದ ಬುಟ್ಟಿ ತುಂಬಬಹುದು.ಶ್ರೀನಿವಾಸ ಪ್ರಸಾದ್ ಅವರು ದಲಿತರ ಮತಗಳನ್ನು ತಮ್ಮಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ಸಲ ಪಕ್ಷ ಬದಲಿಸಿರುವ ಪ್ರಸಾದ್‌ಗೆ ಮತ ನೀಡುವರೆ ಎಂಬ ಪ್ರಶ್ನೆ ಪ್ರಮುಖವಾಗಿ ಕಾಡುತ್ತಿದೆ. ಸಾಕಷ್ಟು ಸಂಖ್ಯೆಯ ದಲಿತರು ಪ್ರಸಾದ್ ಜತೆಗೆ ಇದ್ದಾರೆ ಎಂದು ಹೇಳಲಾಗುತ್ತಿದ್ದರೂ, ಮತಗಳಾಗಿ ಪರಿವರ್ತನೆ ಆಗುವುದೆ ಎಂಬ ಜಿಜ್ಞಾಸೆ ಇದೆ. ಹಾಗಾಗಿ, ಅವರು ದಲಿತರ ‘ಸ್ವಾಭಿಮಾನ’ ಮುಂದಿಟ್ಟಿದ್ದಾರೆ. ಪ್ರಸಾದ್ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಪ್ರಚಾರದಲ್ಲೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದು ವಿರೋಧಿಗಳು ಪ್ರಚಾರ ನಡೆಸಿದ್ದಾರೆ.

ಸಾಧನೆ–  ಸವಾಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಶವಮೂರ್ತಿ ಗೆಲುವು ಪ್ರತಿಷ್ಠೆಯಾಗಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಇರುವುದರಿಂದ ಸರ್ಕಾರದ ಸಾಧನೆಗಳನ್ನು ಒರೆಗೆ ಹಚ್ಚಿದ್ದಾರೆ. ನಾಲ್ಕು ವರ್ಷಗಳ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ. ಉಪ ಚುನಾವಣೆ ಕಾರಣದಿಂದ ಕಳೆದ ನಾಲ್ಕೈದು ತಿಂಗಳಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡಲಾಗಿದೆ. ‘ನಿಮ್ಮ ಕೆಲಸ ಮಾಡಿದ್ದೇವೆ, ಕೂಲಿಕೊಡಿ’ ಎಂದು ಕೇಳುತ್ತಿದ್ದಾರೆ. ಉಪ ಚುನಾವಣೆ ಫಲಿತಾಂಶದ ಮೂಲಕ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿದ್ದು, ಕಾಂಗ್ರೆಸ್‌ಗೂ ಗೆಲುವು ಅನಿವಾರ್ಯವಾಗಿದೆ. ಅದಕ್ಕಾಗಿ ಪಕ್ಷ ಹಾಗೂ ಸರ್ಕಾರ ತನ್ನೆಲ್ಲ ಶಕ್ತಿಯನ್ನು ಪಣಕ್ಕಿಟ್ಟು ಹೋರಾಟ ನಡೆಸಿದೆ.

‘ಕೇಶವಮೂರ್ತಿ ಸಂಭಾವಿತರು. ಎರಡು ಬಾರಿ ಸೋತರೂ ನಿಮ್ಮ ಊರಿನಲ್ಲೇ, ನಿಮ್ಮ ಜತೆಗೇ ಇದ್ದು ಕೆಲಸ ಮಾಡುತ್ತಿದ್ದಾರೆ. ಪ್ರಸಾದ್ ಅವರಿಗೆ ಅಧಿಕಾರ ಕೊಟ್ಟರೂ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕೇಶವಮೂರ್ತಿ ಗೆಲ್ಲಿಸಿದರೆ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗುತ್ತವೆ’ ಎಂದು ಹೇಳುವ ಮೂಲಕ ಮತ ಸೆಳೆಯುವ ಪ್ರಯತ್ನ ನಡೆದಿದೆ.

ಕಾಂಗ್ರೆಸ್‌ನ ಡಜನ್‌ಗಟ್ಟಲೆ ಸಚಿವರು, ನಾಯಕರು ಪ್ರಚಾರ ನಡೆಸಿದ್ದಾರೆ. ಕುರುಬ, ಉಪ್ಪಾರ ಸಮುದಾಯದ ಹೆಚ್ಚಿನ ಮತದಾರರು ಕಾಂಗ್ರೆಸ್‌ ಕಡೆಗೆ ವಾಲಬಹುದು ಎಂದು ನಿರೀಕ್ಷಿಸಲಾಗಿದೆ. ದಲಿತರ ಮತಗಳು ಕೈಬಿಟ್ಟು ಹೋಗದಂತೆ ತಡೆಯುವ ಪ್ರಯತ್ನವೂ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ ಅವರು ದಲಿತರ ಮತಗಳನ್ನು ಸೆಳೆಯಲು ಹರಸಾಹಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಹ ಒಂದು ವಾರದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಹಳ್ಳಿ–ಹಳ್ಳಿ ಸುತ್ತುತ್ತಿದ್ದಾರೆ.

‘ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಅವರಿಗೆ ಕೇಶವಮೂರ್ತಿ ಸರಿಸಾಟಿ ಅಭ್ಯರ್ಥಿಯಲ್ಲ. ದಲಿತ ಸಮುದಾಯವನ್ನು ಪ್ರಸಾದ್ ಪ್ರತಿನಿಧಿಸಿದಷ್ಟು ಸಮರ್ಥವಾಗಿ ಪ್ರತಿನಿಧಿಸಲಾರರು. ಸಂಸದ, ಕೇಂದ್ರ ಸಚಿವ, ಶಾಸಕ, ಸಚಿವರಾಗಿ ನಾಲ್ಕು ದಶಕಗಳ ಕಾಲ ರಾಜಕೀಯ, ಆಡಳಿತ ಅನುಭವದ ಮುಂದೆ ಕೇಶವಮೂರ್ತಿ ಅನುಭವ ಏನೇನೂ ಅಲ್ಲ’ ಎಂಬ ಪ್ರಚಾರ ನಡೆದಿದೆ. ಈ ವಿಚಾರವೂ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.