ADVERTISEMENT

ಅಭ್ಯರ್ಥಿ ಆಯ್ಕೆಗೆ ಕಸರತ್ತು

ವಿಧಾನಪರಿಷತ್‌ ಚುನಾವಣೆ: ಕಾಂಗ್ರೆಸ್‌ ಪಟ್ಟಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಬುಧವಾರ (ಡಿ.2) ಅಧಿಸೂಚನೆ ಹೊರಬೀಳಲಿದ್ದು, ಅಷ್ಟರೊಳಗೆ ರಾಜ್ಯ ಮಟ್ಟದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಪ್ರದೇಶ ಕಾಂಗ್ರೆಸ್ ಕಸರತ್ತು ಆರಂಭಿಸಿದೆ.

ಕ್ಷೇತ್ರವಾರು ನೇಮಿಸಿದ್ದ ವೀಕ್ಷಕರು, ಸ್ಥಳೀಯ ಶಾಸಕರು, ಸಂಸದರು ಹಾಗೂ ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾಗಿದ್ದ ಕಾಂಗ್ರೆಸ್‌ ಮುಖಂಡರಿಂದ ಕೆಪಿಸಿಸಿ ಈಗಾಗಲೇ ವರದಿಗಳನ್ನು ತರಿಸಿಕೊಂಡಿದ್ದು, ಪರಿಶೀಲನೆ ನಡೆದಿದೆ.

ಕೆಲ ಕ್ಷೇತ್ರಗಳಿಗೆ ಒಂದೊಂದೇ ಹೆಸರು ಶಿಫಾರಸು ಆಗಿವೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಎರಡು–ಮೂರು ಹೆಸರುಗಳು ಶಿಫಾರಸು ಆಗಿದ್ದು, ಅವುಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲಿಸಲಿದ್ದಾರೆ. ಈ ಕುರಿತು ಚರ್ಚಿಸಲು ಒಂದೆರಡು ದಿನಗಳಲ್ಲಿ ಸಭೆ ಸೇರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ಪಟ್ಟಿಗೆ ಹೈಕಮಾಂಡ್‌ ಒಪ್ಪಿಗೆ ಪಡೆಯಲು ಅಧ್ಯಕ್ಷರು ಮತ್ತು ತಾವು ಮುಂದಿನ ವಾರದಲ್ಲಿ ದೆಹಲಿಗೆ ತೆರಳುವುದಾಗಿ ಅವರು ತಿಳಿಸಿದ್ದಾರೆ.
ಟಿಕೆಟ್‌ಗಾಗಿ ಪೈಪೋಟಿ: ಚಿತ್ರದುರ್ಗ– ದಾವಣಗೆರೆ ಕ್ಷೇತ್ರದಿಂದ ಕೆಳದ ಬಾರಿ ಪಕ್ಷೇತರರಾಗಿ ಗೆದ್ದಿದ್ದ ರಘು ಆಚಾರ್‌  ಕಾಂಗ್ರೆಸ್‌ ಅಭ್ಯರ್ಥಿ ಯಾಗಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಹಬೂಬ್ ಪಾಷಾ ಕೂಡ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಸೋದರ ಸಂಬಂಧಿ ಎಸ್‌.ರವಿ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ. ಮಂಡ್ಯ ಕ್ಷೇತ್ರದಿಂದ  ಮಾಜಿ ಶಾಸಕರಾದ ಸುರೇಶಗೌಡ, ಎಲ್‌.ಆರ್‌. ಶಿವರಾಮೇಗೌಡ ಸೇರಿದಂತೆ ಹಲವರು ಪೈಪೋಟಿ ನಡೆಸಿದ್ದಾರೆ. ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವುದು ಖಚಿತವಾಗಿದೆ.

ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರು, ಪುತ್ರ ಆರ್‌.ರಾಜೇಂದ್ರ ಅವರಿಗೆ ತುಮಕೂರು ಕ್ಷೇತ್ರದಿಂದ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ತುಮಕೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಫೀ ಅಹಮದ್‌ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.
ಕೋಲಾರ ಕ್ಷೇತ್ರದಿಂದ ನಜೀರ್ ಅಹಮದ್‌ ಅವರಿಗೆ ಟಿಕೆಟ್‌ ಕೊಡಲು ಸಂಸದ ಕೆ.ಎಚ್‌.ಮುನಿಯಪ್ಪ ವಿರೋಧ  ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಅವರ ಬದಲಿಗೆ, ಬಿಸೇಗೌಡ ಪರ ಮುನಿಯಪ್ಪ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಕ್ಷೇತ್ರದಿಂದ ಕೆ.ಸಿ.ಕೊಂಡಯ್ಯ ಹೆಸರು ಬಹುತೇಕ ಅಂತಿಮವಾಗಿದೆ.

ದಕ್ಷಿಣ ಕನ್ನಡ– ಉಡುಪಿ ಕ್ಷೇತ್ರದಿಂದ ಹಾಲಿ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ಈ ಬಾರಿ  ಕಣಕ್ಕಿಳಿಯುವುದಿಲ್ಲ ಎಂದು  ಘೋಷಿಸಿದ್ದರು. ಇಲ್ಲಿನ ಟಿಕೆಟ್‌ಗಾಗಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮತ್ತು ಎಂ.ಎ.ಗಫೂರ್, ಮಾಜಿ ಶಾಸಕ ಎಚ್‌.ಗೋಪಾಲ ಭಂಡಾರಿ ಅವರು ಪೈಪೋಟಿ ನಡೆಸಿದ್ದರು.  ಗೊಂದಲ  ತಪ್ಪಿಸುವ ಸಲುವಾಗಿ ಪ್ರತಾಪ ಚಂದ್ರ ಶೆಟ್ಟಿ ಅವರನ್ನೇ ಕಣಕ್ಕಿಳಿಯುವಂತೆ ಮನವೊಲಿಸಲು ಮುಖಂಡರು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.   
  
ರಾಜ್ಯ ಆಹಾರ ನಿಗಮದ ಅಧ್ಯಕ್ಷ ಎಸ್‌.ಎಂ.ಆನಂದ ಮತ್ತು ಚನ್ನರಾಯ ಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಾಲಸ್ವಾಮಿ ಅವರ ಹೆಸರು ಹಾಸನ ಕ್ಷೇತ್ರದಿಂದ ಶಿಫಾರಸು ಆಗಿದೆ. ಹಿರಿಯ ಮುಖಂಡ ಧರ್ಮಸಿಂಗ್‌ ಅವರ ಪುತ್ರ ವಿಜಯ್ ಸಿಂಗ್‌ ಅವರಿಗೆ ಬೀದರ್‌ ಕ್ಷೇತ್ರದ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಟಿಕೆಟ್‌ ಬಹುತೇಕ ಖಚಿತ
ಐಟಿ–ಬಿಟಿ ಸಚಿವ ಎಸ್‌.ಆರ್‌. ಪಾಟೀಲ್‌ (ಬಾಗಲಕೋಟೆ), ದಯಾನಂದ ರೆಡ್ಡಿ (ಬೆಂಗಳೂರು ನಗರ),  ನಾಗರಾಜ ಛಬ್ಬಿ, ಶ್ರೀನಿವಾಸ ಮಾನೆ (ಹುಬ್ಬಳ್ಳಿ–ಧಾರವಾಡ).

ಅಲ್ಲಮ ಪ್ರಭು ಪಾಟೀಲ್‌ (ಕಲಬುರ್ಗಿ),  ನಜೀರ್‌ ಅಹಮದ್‌ (ಕೋಲಾರ),  ಟಿ.ಜಾನ್‌ (ಕೊಡಗು), ವೀರ ಕುಮಾರ್‌ ಪಾಟೀಲ (ಬೆಳಗಾವಿ), ಧರ್ಮಸೇನ (ಮೈಸೂರು), ಗಾಯತ್ರಿ ಶಾಂತೇಗೌಡ (ಚಿಕ್ಕಮಗಳೂರು) ಅವರು ಹಾಲಿ ಸದಸ್ಯರಿದ್ದು, ಇಷ್ಟೂ ಮಂದಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.