ADVERTISEMENT

ಅಮೆರಿಕಕ್ಕೆ ರಾಜ್ಯದ ಮಾವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 22:30 IST
Last Updated 30 ಜೂನ್ 2016, 22:30 IST
ಅಮೆರಿಕಕ್ಕೆ ರಾಜ್ಯದ ಮಾವು
ಅಮೆರಿಕಕ್ಕೆ ರಾಜ್ಯದ ಮಾವು   

ಬೆಂಗಳೂರು: ರಾಜ್ಯದ ಮಾವಿನ ಹಣ್ಣುಗಳು ಅಮೆರಿಕದ ಮಾರುಕಟ್ಟೆಯನ್ನು ಪ್ರವೇಶಿಸಿವೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ತೋಟಗಾರಿಕಾ ಇಲಾಖೆ, ಅಪೆಡಾ ಹಾಗೂ ಮಾಲೂರಿನ ಇನೋವಾ ಅಗ್ರಿ ಬಯೋಪಾರ್ಕ್‌ ಸಹಯೋಗದಲ್ಲಿ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಫ್ತು ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಯಿತು.

‘ಮಾವು ಸಂಗ್ರಹಿಸಿದ ಬಳಿಕ ರಫ್ತು ಮಾಡಲು ಯೋಗ್ಯವಾದವುಗಳನ್ನು ಪ್ರತ್ಯೇಕಿಸಲಾಗುತ್ತದೆ. ಉಳಿದ ಹಣ್ಣುಗಳು ರಸ (ಪಲ್‍ಪ್) ತಯಾರಿಸಲು ಬಳಕೆಯಾಗುತ್ತವೆ. ಶೇ 80ರಷ್ಟು ಹಣ್ಣುಗಳು ದೇಶದ ವಿವಿಧೆಡೆಯ ಜ್ಯೂಸ್‌ ಕಂಪೆನಿಗಳಿಗೆ ರವಾನೆಯಾದರೆ, ಉಳಿದ ತಾಜಾ ಹಣ್ಣುಗಳು ಮಾತ್ರವೇ ಮಾರುಕಟ್ಟೆ ಪ್ರವೇಶಿಸುತ್ತವೆ.

ಅದರಲ್ಲೂ ಅತ್ಯುತ್ತಮ ಹಣ್ಣುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಅಮೆರಿಕಕ್ಕೆ ರಫ್ತು ಆಗುತ್ತಿದೆ’ ಎಂದು ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಎಂ.ಕಮಲಾಕ್ಷಿ ರಾಜಣ್ಣ ತಿಳಿಸಿದರು.

‘ಕೇಂದ್ರ ಸರ್ಕಾರದ ಮನವಿಗೆ ಸ್ಪಂದಿಸಿ ಅಮೆರಿಕದ ಅಧಿಕಾರಿಗಳು ಮಾಲೂರಿಗೆ ಭೇಟಿ ನೀಡಿ ಪರಿಶೀಲಿಸಿ ಮಾವಿನ ಹಣ್ಣು ರಫ್ತು ಮಾಡಲು ಅನುಮೋದನೆ ನೀಡಿದ್ದರು. ಕೆಡದಂತೆ ತಡೆಯಲು ಹಣ್ಣುಗಳಿಗೆ ಬಿಸಿನೀರಿನ ಚಿಕಿತ್ಸೆ ನೀಡಲಾಗಿದೆ. ಪ್ರಾಯೋಗಿಕವಾಗಿ 6 ಟನ್ ಹಣ್ಣುಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿತ್ತು. ಈಗ 80 ಟನ್ ಕಳುಹಿಸಲಾಗುತ್ತಿದೆ’ ಎಂದರು.

‘ಸದ್ಯ ಅಲ್ಫಾನ್ಸೊ, ಬಂಗನಪಲ್ಲಿ, ದಶೇರಿ ಹಾಗೂ ಕೇಸರಿ ಹಣ್ಣುಗಳನ್ನು ಅಮೆರಿಕಕ್ಕೆ ಕಳುಹಿಸಲಾಗುತ್ತಿದೆ. 1,200 ಟನ್‌ ಹಣ್ಣಿಗೆ ಬೇಡಿಕೆ ಇದೆ. ಮುಂದಿನ ವರ್ಷ ಅಧಿಕ ಪ್ರಮಾಣದ ಹಣ್ಣು ಪೂರೈಕೆ ಮಾಡುತ್ತೇವೆ’ ಎಂದರು.

ಯುರೋಪ್‌ನಲ್ಲಿ ಬೇಡಿಕೆ
ಭಾರತದ ಮಾವು ಹತ್ತಾರು ದೇಶಗಳಿಗೆ ರಫ್ತಾಗುತ್ತದೆ. ಅದರಲ್ಲೂ ಅಲ್ಫಾನ್ಸೊ ಮಾವಿಗೆ ಯುರೋಪ್‌ ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚು ಬೇಡಿಕೆಯಿದೆ. ಮಾವಿನ ಜತೆಗೆ ಕೀಟಗಳೂ ನುಸುಳಬಹುದು ಎಂಬ ಆತಂಕದಿಂದ ಐರೋಪ್ಯ ಒಕ್ಕೂಟ ಭಾರತದ ಅಲ್ಫಾನ್ಸೊ ಮಾವಿಗೆ 2014ರ ಅಂತ್ಯದಲ್ಲಿ ನಿಷೇಧ ಹೇರಿತ್ತು.

ಭಾರತದಲ್ಲಿ ಸಸ್ಯಗಳನ್ನು ಬೆಳೆ­ಸುವ ವಿಧಾನದಲ್ಲಿ ಸುಧಾರಣೆ ಕಂಡಿ­ರು­ವುದು ಮತ್ತು ಸಸ್ಯಗಳನ್ನು ಪ್ರಮಾ­ಣೀಕರಿಸುವ ವ್ಯವಸ್ಥೆ ಜಾರಿ ತಂದಿರುವ ಕಾರಣ ನಿಷೇಧವನ್ನು ಹಿಂತೆಗೆದುಕೊಂಡಿತ್ತು.

ಅಂಕಿಅಂಶಗಳು
* 1200 ಟನ್‌ ಅಮೆರಿಕದ ಬೇಡಿಕೆ
* 80 ಟನ್‌ ಅಮೆರಿಕಕ್ಕೆ ರಫ್ತು
* 10 ಸಾವಿರ ಟನ್‌ ವಿದೇಶಿ ಬೇಡಿಕೆ
* 70 ಟನ್‌ ಇಂಗ್ಲೆಂಡ್‌ಗೆ ರಫ್ತು
* 4,500 ರೈತರು-ಕೇಂದ್ರ ಸರ್ಕಾರದ ಅಪೇಡಾ ಮ್ಯಾಂಗೊನೆಟ್‌ನಲ್ಲಿ ನೋಂದಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT