ADVERTISEMENT

ಆರ್‌ಎಸ್‌ಎಸ್‌ ಕಾರ್ಯಕರ್ತನ ಶವಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿದ ಐವರು ಮುಖಂಡರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 13:35 IST
Last Updated 21 ಜುಲೈ 2017, 13:35 IST
ಆರ್‌ಎಸ್‌ಎಸ್‌ ಕಾರ್ಯಕರ್ತನ ಶವಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿದ ಐವರು ಮುಖಂಡರು
ಆರ್‌ಎಸ್‌ಎಸ್‌ ಕಾರ್ಯಕರ್ತನ ಶವಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿದ ಐವರು ಮುಖಂಡರು   

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಕುಮಾರ್‌ ಶವಯಾತ್ರೆ ವೇಳೆ ಕಲ್ಲು ತೂರಾಟಕ್ಕೆ ಪಿತೂರಿ ನಡೆಸಿರುವುದು ಹಾಗೂ ಗಲಭೆಗೆ ಪಿತೂರಿ ನಡೆಸಿರುವ ಆರೋಪ ಎದುರಿಸುತ್ತಿದ್ದು, ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಬಿಜೆಪಿ ಮತ್ತು ಸಂಘ ಪರಿವಾರದ ಐವರು ಮುಖಂಡರು ನಿರೀಕ್ಷಣಾ ಜಾಮೀನು ಕೋರಿ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕಲ್ಲು ತೂರಾಟ ಮತ್ತು ಗಲಭೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಜುಲೈ 8ರಂದು ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ಪ್ರಮುಖ  ಆರೋಪಿಗಳೆಂದು ಹೆಸರಿಸಿರುವ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಬಜರಂಗದಳ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌, ಬಜರಂಗದಳದ ಮುಖಂಡ ಪ್ರದೀಪ್‌ ಪಂಪ್‌ವೆಲ್‌, ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಪೂಂಜ ಮತ್ತು ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್‌ ಮುರಳಿಕೃಷ್ಣ ಹಸಂತಡ್ಕ ನಿರೀಕ್ಷಣಾ ಜಾಮೀನು ಕೋರಿ ಜುಲೈ 17ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸತ್ಯಜಿತ್‌ ಮತ್ತು ಹರೀಶ್‌ ಪೂಂಜ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮುರಳಿಕೃಷ್ಣ, ಶರಣ್‌ ಮತ್ತು ಪ್ರದೀಪ್‌ ಒಂದೇ ಅರ್ಜಿಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಎಲ್ಲ ಐದು ಜನರ ಪರವಾಗಿ ವಕೀಲ ಕೆ.ಎಸ್‌.ಶರ್ಮ ವಕಾಲತ್ತು ಸಲ್ಲಿಸಿದ್ದು, ಮೂರು ಅರ್ಜಿಗಳನ್ನೂ ಸೋಮವಾರವೇ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಬಂಟ್ವಾಳ ನಗರ ಠಾಣೆಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಶನಿವಾರ ಮೂರೂ ಅರ್ಜಿಗಳ ವಿಚಾರಣೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.