ADVERTISEMENT

ಇರುವೆ ಕಚ್ಚಿ ಅಂಗವಿಕಲ ಯುವಕ ಸಾವು: ಸ್ಥಳೀಯರಿಂದ ಅಂತ್ಯ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 20:13 IST
Last Updated 3 ನವೆಂಬರ್ 2017, 20:13 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕಾರವಾರ: ಕಪ್ಪು ಇರುವೆ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಅಂಗವಿಕಲ ಯುವಕ ಶಿವು ಚಂದ್ರಸ್ವಾಮಿ (19) ಎಂಬಾತ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾನೆ.

ಬೈತ್‌ಖೋಲ್‌ನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಯಿ ಕಮಲಾರ ಜತೆ ಗುಡಿಸಲಿನಲ್ಲಿ ಈತ ವಾಸವಾಗಿದ್ದ. ಈತನ ತಾಯಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಅದರಲ್ಲಿ ಅವಳಿ ಮ್ಕಳಾದ ಈತ ಹಾಗೂ ಸಂಗೀತಾ ಹುಟ್ಟು ಅಂಗವಿಕಲರಾಗಿದ್ದರು.

ಇರುವೆ ಕಚ್ಚಿತು: ‘ತುಳಸಿ ವಿವಾಹಕ್ಕಾಗಿ (ತುಳಸಿ ಪೂಜೆ) ಮನೆಯಲ್ಲಿ ಕಬ್ಬನ್ನು ತಂದು ಇಡಲಾಗಿತ್ತು. ಈ ವೇಳೆ ಅದಕ್ಕೆ ಕಪ್ಪು ಇರುವೆ ಬಂದಿದ್ದು, ತಾಯಿ ಕೆಲಸಕ್ಕೆ ತೆರಳಿದ ಸಂದರ್ಭ ಅದು ಶಿವುವನ್ನು ಸಂಪೂರ್ಣವಾಗಿ ಆಕ್ರಮಿಸಿವೆ. ಕೆಲಹೊತ್ತು ಅದು ಆತನನ್ನು ಕಚ್ಚಿದ್ದು, ನೋವು ತಾಳಲಾರದೆ ಆತ ಕಿರುಚಾಟ ಪ್ರಾರಂಭಿಸಿದ್ದಾನೆ. ಅದನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾಗ ಆತ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಯಿತು. ಆದರೆ ಆಗ ಅವನ ಹೃದಯದಿಂದ ರಕ್ತದ ಸಂಚಾರ ಸ್ತಬ್ಧಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಶಿವು ಅಸುನೀಗಿದ್ದಾನೆ’ ಎಂದು ಜನಶಕ್ತಿ ವೇದಿಕೆಯ ಮಾಧವ ನಾಯಕ ತಿಳಿಸಿದರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು, ‘ಆತನಿಗೆ ಮೊದಲಿನಿಂದಲೂ ಹೃದಯ ಸಂಬಂಧಿ ತೊಂದರೆ ಇತ್ತು. ಆದರೆ ಗುರುವಾರ ಆತನ ಹೃದಯದಿಂದ ರಕ್ತ ಸಂಚಾರ ಸ್ತಬ್ಧಗೊಂಡಿತ್ತು. ಹೀಗಾಗಿ ಆತನ ದೇಹ ಚಿಕಿತ್ಸೆಗೆ ಸ್ಪಂದಿಸದೇ ಮೃಪಟ್ಟಿದ್ದಾನೆ’ ಎಂದು ತಿಳಿಸಿದರು.

ಶವ ಸಂಸ್ಕಾರಕ್ಕೂ ಹಣವಿಲ್ಲ: ತೀರಾ ಬಡತನದಲ್ಲಿದ್ದ ಆತನ ಕುಟುಂಬಕ್ಕೆ ಶವ ಸಂಸ್ಕಾರ ನಡೆಸಲೂ ಹಣವಿಲ್ಲದೇ ಕೊರಗುತ್ತಿದ್ದರು. ಬಳಿಕ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ನಗರಸಭೆಯ ಸದಸ್ಯೆ ಛಾಯಾ ಜಾವ್ಕಾರ್ ಹಾಗೂ ಸ್ಥಳೀಯ ನಿವಾಸಿ ವಿಲ್ಸನ್ ಫರ್ನಾಂಡಿಸ್ ಮಾಹಿತಿ ತಿಳಿದು ಆತನ ಅಂತಿಮ ಸಂಸ್ಕಾರ ನೆರವೇರಿಸಿದರು. ಡಿಸಿಎಫ್ ಕೆ.ಗಣಪತಿ ಕಟ್ಟಿಗೆಯನ್ನು ಉಚಿತ ವ್ಯವಸ್ಥೆ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.