ADVERTISEMENT

ಕಟ್ಟಿಮನಿ ಪ್ರತಿಷ್ಠಾನ ಕಚೇರಿ ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಬೆಳಗಾವಿ: ಡಾ.ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಕಚೇರಿಗಾಗಿ ಸರ್ಕಾರ ನಗರದಲ್ಲಿ ನೀಡಿದ್ದ ಕಟ್ಟಡವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪ್ರತಿಷ್ಠಾನ ಅತಂತ್ರವಾಗುವ ಆತಂಕ ಎದುರಿಸುತ್ತಿದೆ.

ಕುಮಾರ ಗಂಧರ್ವ ರಂಗಮಂದಿರದ ಹಿಂಭಾಗದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಕಟ್ಟಡವನ್ನು ಎರಡು ವರ್ಷಗಳ ಹಿಂದೆ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಾಗಿ ಸರ್ಕಾರ ತಾತ್ಕಾಲಿಕವಾಗಿ ನೀಡಿತ್ತು. ಆರು ತಿಂಗಳೊಳಗೆ ತೆರವುಗೊಳಿಸುವಂತೆ ಸೂಚಿಸಿ, ಅಧ್ಯಕ್ಷ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಜಿಲ್ಲಾಧಿಕಾರಿ ಎನ್‌.ಜಯರಾಂ ಕಳೆದ ತಿಂಗಳು ನೋಟಿಸ್‌ ನೀಡಿದ್ದರು.

‘ಗಡಿ ಭಾಗದಲ್ಲಿ ಕನ್ನಡದ ಅಭಿವೃದ್ಧಿಗೆ ಪೂರಕವಾಗಿರುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಪ್ರತಿಷ್ಠಾನ, ಆ ಕಾರ್ಯಕ್ರಮಗಳನ್ನು ಮುಂದುವರಿಸುವ ಬಯಕೆ ಹೊಂದಿದ್ದರೂ, ಕೆಲವರಿಂದ ತೀವ್ರ ಕಾಟ ಎದುರಾಗಿದೆ’ ಎಂದು ಆರೋಪಿಸಿ ಡಾ. ಕಲಬುರ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಡಾ.ಕಟ್ಟಿಮನಿ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರ ರಾಜೀನಾಮೆ ವಿಷಯ ತಿಳಿದ ಸಭಿಕರು ವಿರೋಧ ವ್ಯಕ್ತಪಡಿಸಿದ್ದರಿಂದ, ಕಾರ್ಯಕ್ರಮದಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಜಿಲ್ಲಾಡಳಿತ ನೀಡಿರುವ ನೋಟಿಸ್‌ ಕುರಿತು ಪರಿಶೀಲಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಪ್ರತಿಕ್ರಿಯೆ ಬಂದಿಲ್ಲ.

ನನ್ನನ್ನು ಸಂಪರ್ಕಿಸಲಿಲ್ಲ: ‘ಮೊದಲು ದುಃಸ್ಥಿತಿಯಲ್ಲಿದ್ದ ಕಟ್ಟಡವನ್ನು ಸರ್ಕಾರದ ಅನುದಾನದೊಂದಿಗೆ  ಅಭಿವೃದ್ಧಿಪಡಿಸಲಾಗಿದೆ. ಕೆಲಸ ಕಾರ್ಯಗಳು ಮುಂದುವರಿದಿರುವಾಗಲೇ ತೆರವಿಗೆ ಸೂಚನೆ ಬಂದಿದೆ’ ಎಂದು ಅಧ್ಯಕ್ಷ ಡಾ. ಕಲಬುರ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲಾಧಿಕಾರಿಯವರು ಕಟ್ಟಡ ತೆರವುಗೊಳಿಸುವಂತೆ ನೋಟಿಸ್‌ ನೀಡುವ ಮೊದಲು ನನ್ನನ್ನು ಸಂಪರ್ಕಿಸಬೇಕಿತ್ತು. ಅಲ್ಲದೆ, ತೆರವಿಗೆ ಸೂಚಿಸಿದ್ದರ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಸಬೇಕಿತ್ತು. ಇದ್ದಕ್ಕಿದ್ದಂತೆಯೇ ತೆರವುಗೊಳಿಸಲು ಸೂಚಿಸಿರುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ಕಲಾವಿದರಿಗೆ ಮೀಸಲು: ‘ಕಟ್ಟಿಮನಿ ಪ್ರತಿಷ್ಠಾನಕ್ಕೆ ಸರ್ಕಾರ ತಾತ್ಕಾಲಿಕವಾಗಿ ಆ ಕಟ್ಟಡ ನೀಡಿತ್ತು. ಇನ್ನೂ ಕೆಲವರು ಕಟ್ಟಡ ಕೋರಿ ಮನವಿ ಸಲ್ಲಿಸಿದ್ದಾರೆ. ಕಲಾವಿದರಿಗೆಂದು ನಿರ್ಮಿಸಿರುವ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದನ್ನು ಆಕ್ಷೇಪಿಸಿದ್ದರಿಂದ  ತೆರವುಗೊಳಿಸಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಂ ಹೇಳಿದರು.

ಆಕ್ಷೇಪ: ‘ಸರ್ಕಾರ ಪ್ರತಿ ವರ್ಷ ₨ 12 ಲಕ್ಷ ಅನುದಾನ ನೀಡುತ್ತಿದೆ. ಪ್ರತಿಷ್ಠಾನದ ಕಚೇರಿಯನ್ನು ಬೇರೆಡೆ ಸ್ಥಾಪಿಸಿ, ಚಟುವಟಿಕೆ ಮುಂದುವರಿಸಬಹುದು.  ತಮಗೆ ಮೀಸಲಾದ ಕಟ್ಟಡವನ್ನು ಬೇರೆಯವರಿಗೆ ನೀಡಿರುವುದಕ್ಕೆ ಕಲಾವಿದರು ಆಕ್ಷೇಪಿಸಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿದ್ಯಾವತಿ ಭಜಂತ್ರಿ ಹೇಳಿದರು.

ಪ್ರತಿಷ್ಠಾನವನ್ನು ಕಟ್ಟಡದಿಂದ ತೆರವುಗೊಳಿಸದಂತೆ ಸಂಬಂಧಿಸಿದ ಸಚಿವರು ಕ್ರಮ ಕೈಗೊಳ್ಳಬೇಕು
ಡಿ.ಎಸ್‌.ಚೌಗಲೆ,
ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.