ADVERTISEMENT

ಕಾರ್ನಾಡ, ಪ್ರಕಾಶ ರೈ ಒಗ್ಗರಣೆಗೆ ಉಪ್ಪು–ಖಾರ!

ಪ್ರಕಾಶ ಕುಗ್ವೆ
Published 18 ಜನವರಿ 2015, 19:30 IST
Last Updated 18 ಜನವರಿ 2015, 19:30 IST

ಧಾರವಾಡ: ಅಲ್ಲಿದ್ದ ಇಬ್ಬರೂ ದಿಗ್ಗಜರು. ಇಬ್ಬರ ಆಸಕ್ತಿಯೂ ಒಂದೇ. ಇಬ್ಬರೂ ಅಲ್ಲಿ ನಟನೆ, ನಟ, ರಂಗ­ಭೂಮಿ, ಸಿನಿಮಾ, ಭಾಷೆ ಕುರಿತಂತೆ ಪ್ರಶ್ನೋತ್ತರ ನಡೆಸಿದರು. ಸಾಹಿತ್ಯ ಸಂಭ್ರ­ಮದ ಕೊನೆಯ ಗೋಷ್ಠಿ ‘ಅಭಿನಯ ಮತ್ತು ಭಾಷೆ’ ಬಗ್ಗೆ ಇಬ್ಬರದ್ದು ಜುಗಲ್‌ಬಂದಿ.

ನಾಟಕಕಾರ ಗಿರೀಶ್‌ ಕಾರ್ನಾಡ ಪ್ರಶ್ನೆ ಕೇಳುತ್ತಲೇ ಹೋದರು. ಚಿತ್ರನಟ ಪ್ರಕಾಶ ರೈ, ಸಿನಿಮಾ ಸಂಭಾಷಣೆ ಉದು­ರಿಸಿದಂತೆ ಪಟ–ಪಟನೆ ಉತ್ತರಿಸುತ್ತಲೇ ಹೋದರು. ಜತೆಗೆ ಸಭಿಕರ ಪ್ರಶ್ನೆಗಳ ಬಾಣಗಳಿಗೆ ಇಬ್ಬರೂ ಉತ್ಸಾಹದ ಉತ್ತರವನ್ನೇ ನೀಡಿದರು.

‘ನಟನೆಗೆ ಹೇಗೆ ಬಂದಿರಿ’ ಎಂಬ ಕಾರ್ನಾಡರ ಪ್ರಶ್ನೆಗೆ, ‘ಜೀವನದಲ್ಲಿ ಒಂದು ದಿಗಂತ ಕಾಣುತ್ತಿತ್ತು; ಹುಡುಕಿ­ಕೊಂಡು ಹೊರಟೆ. ತಾಯಿ ನರ್ಸ್‌–ತಂದೆ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಯಲ್ಲಿ ಭಾಷಣ ಮಾಡಿ ಬಹುಮಾನ ಪಡೆದು­ಕೊಳ್ಳುತ್ತಿದ್ದೆ. ಬೆಂಗಳೂರಿಗೆ ಬಂದೆ; ಅಲ್ಲಿ ಎಚ್‌.ಎಚ್‌. ವೆಂಕಟೇಶಮೂರ್ತಿ, ಜಿ.ಕೆ.ಗೋವಿಂದರಾವ್‌ ಅವರ ಪಾಠ ಕೇಳಿದೆ. ಎಚ್‌.ಎಸ್‌. ಶಿವಪ್ರಕಾಶ್, ಪ್ರಸನ್ನ, ಸಿಜಿಕೆ ಪರಿಚಯವಾಯಿತು. ನಾಟಕದ ಗುಂಗು ಹತ್ತಿಸಿದರು. ನಾಟಕ ಆಡಿಕೊಂಡಿದ್ದರೆ ಸುಖವಾಗಿ ಇರಬಹುದು ಎನ್ನಿಸಿತು. ಅಲ್ಲಿಂದ ಇಲ್ಲಿಯವರೆಗೆ ಓಡಾಟ ನಡೆದಿದೆ’ ಎಂದು ವಿವರಣೆ ನೀಡಿದರು ಪ್ರಕಾಶ ರೈ.

‘ಅಭಿನಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. ‘ಸಂಸ್ಕಾರ’ ಕಾದಂಬರಿ ಓದಿದ ತಕ್ಷಣ ಇದನ್ನು ಸಿನಿಮಾ ಮಾಡಬೇಕು ಅನ್ನಿಸಿತು. ಬೇರೆ ನಟ–ನಟಿಯರನ್ನು ಹಾಕಿಕೊಂಡು ಸಿನಿಮಾ ಮಾಡಲು ಹಣ ಇರಲಿಲ್ಲ. ಹಾಗಾಗಿ, ನಾನೇ ಹೀರೋ ಆದೆ. ನಿರ್ಮಾಪಕರ ಪತ್ನಿಯೇ ಹೀರೋಯಿನ್‌ ಆದರು. ಮುಂದೆ ಆ ಚಿತ್ರ ಬ್ಯಾನ್‌ ಆಯಿತು. ಮತ್ತೆ ಇದೇ ಚಿತ್ರಕ್ಕೆ ಸರ್ಕಾರ ಪ್ರಶಸ್ತಿ ನೀಡಿತು. ಒಮ್ಮೆ ಸಿನಿಮಾ, ರಕ್ತದಲ್ಲಿ ಸೇರಿಕೊಂಡರೆ ಅದರಿಂದ ಹೊರಗೆ ಬರುವುದು ಕಷ್ಟ’ ಎಂದು ಕಾರ್ನಾಡ ತಮ್ಮ ನಟನ ಯಾನದ ಬಗ್ಗೆ ಹೇಳಿದರು.

ನಟನೆಗೆ ಭಾಷೆ ಎಷ್ಟು ಮುಖ್ಯ ಎಂದು ಕಾರ್ನಾಡ ಎರಡನೇ ಪ್ರಶ್ನೆ ಎಸೆದರು.  ನಟನ ಭಾಷೆ ಅಭಿನಯ. ನಟ ಭಾಷೆಯ ಭಾವ ಅರ್ಥಮಾಡಿ ಕೊಳ್ಳಬೇಕು. ನಟನ ಕೆಲಸ ಅನುಭವ ವನ್ನು ಮುಟ್ಟಿಸುವುದು. ಯಾವುದೇ ಪಾತ್ರ ಆತನಿಗೆ ಮೊದಲು ಅರ್ಥವಾ ಗಬೇಕು. ಆ ಉನ್ಮಾದವನ್ನು ತಾನು ಮೊದಲು ಅನುಭವಿಸಬೇಕು. ತದ ನಂತರ ಪ್ರೇಕ್ಷಕರಿಗೆ ಉಣಬಡಿಸಬೇಕು ಎಂದರು ರೈ.

ತಮಿಳು–ತೆಲುಗು–ಹಿಂದಿ ಭಾಷೆ­ಗಳಲ್ಲಿ ಅಭಿನಯಿಸುವಾಗ ಭಾಷೆ ತೊಡ­ಕಾಗಿಲ್ಲವೇ ಎಂಬ ಪ್ರಶ್ನೆಗೆ, ಮಾತೃ­ಭಾಷೆ­ಯನ್ನು ಸಂಪೂರ್ಣ ಕಲಿತರೆ ಯಾವ ಭಾಷೆಯನ್ನಾದರೂ ಕಲಿಯ ಬಹುದು. ಯಾವುದೇ ಭಾಷೆ ಕಲಿಯಬೇಕಾದರೆ ಮೊದಲು ಆ ಭಾಷೆಯನ್ನು ಗೌರವಿಸಬೇಕು ಎಂದರು ರೈ.

‘ಸಿನಿಮಾ ಪೇಂಟಿಂಗ್‌ ಇದ್ದ ಹಾಗೆ; ನಟ ಬಣ್ಣ ಇದ್ದಂತೆ. ಹುಟ್ಟಾ ಡಾಕ್ಟರ್‌ ಹೇಗೆ ಇರುವುದಿಲ್ಲವೋ ಹಾಗೆಯೇ, ಹುಟ್ಟಾ ಕಲಾವಿದರೂ ಇರುವುದಿಲ್ಲ. ಮಾತಿಗೆ ಹುಟ್ಟಾ ಕಲಾವಿದ ಎಂದು ಹೇಳುತ್ತಾರೆ ಅಷ್ಟೇ ಎಂದು ಸಭಿಕರ ಪ್ರಶ್ನೆಗೆ ಉತ್ತರಿಸಿದರು ರೈ.

‘ಲೇ ಮಗನೇ?’: ‘ಲೇ ಮಗನೇ ನೀನು ಧಾರವಾಡ ಬಿಟ್ಟು ಹೋದ ಮೇಲೆ ಇಲ್ಲಿ ರಂಗ­ಭೂಮಿ ಹಾಳಾಗಿದೆ. ನೀನು ಸಿನಿಮಾ ಬಿಟ್ಟು ಬಂದು ಯಾವಾಗ ಇಲ್ಲಿ ಕೆಲಸ ಮಾಡುತ್ತಿಯೋ’ ಎಂದು ಧಾರವಾಡದ ಹಿರಿಯ ವಿದ್ವಾಂಸ ವೃಷಭೇಂದ್ರ ಸ್ವಾಮಿ, ಕಾರ್ನಾಡ ಅವರನ್ನು ಏಕವಚನದಲ್ಲಿ ಪ್ರಶ್ನಿಸಿದರು. ‘ನನ್ನೂರು ಇದೆ. ನನಗೆ ಇಲ್ಲಿಯೇ ಮನೆ ಇದೆ’ ಎಂದಷ್ಟೇ ಹೇಳಿ ಕಾರ್ನಾಡ ಸುಮ್ಮನಾದರು.

ತಮಾಷೆಗೆ ಹೇಳಿದ್ದು: ಹಣಕ್ಕಾಗಿ ಕರ್ಮಷಿಯಲ್ ಸಿನಿಮಾ­ದಲ್ಲಿ ಮಾಡುತ್ತೇನೆ ಎಂದು ಹೇಳುತ್ತಿ­ದ್ದೀರಿ.  ಇಷ್ಟವಿಲ್ಲದ ಕೆಲಸವನ್ನು ಪದೇ ಪದೇ ಹೇಗೆ ಮಾಡುತ್ತೀರಿ? ತೃಪ್ತಿ ಸಿಗುತ್ತಿಲ್ಲ ಎನ್ನುವುದು ‘ನಟನೆ’ಯ ಭಾಗವೇ? ಎಂದು ವಿಮರ್ಶಕ ಡಾ.ಸಿ. ಎನ್‌.ರಾಮಚಂದ್ರನ್‌, ಕಾರ್ನಾಡ ಅವರಿಗೆ ನೇರ ಪ್ರಶ್ನೆ ಮಾಡಿದರು.

ತಕ್ಷಣಕ್ಕೆ ಉತ್ತರಿಸಲು ಕಾರ್ನಾಡ ತಡಕಾಡಿದಾಗ, ನೆರವಿಗೆ ಬಂದ ಪ್ರಕಾಶ ರೈ, ‘ಅವರು ತಮಾಷೆಗೆ ಹೇಳಿದ್ದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ’ ಎಂದು ಹೇಳಿ ಚರ್ಚೆ ನಿಲ್ಲಿಸಿದರು.

ಹೀಗೆ ಕೇಳಿದರೆ ಏನು ಅರ್ಥ?: ‘ಸಿಂಗಂ’ ಸಿನಿಮಾದಲ್ಲಿ ಪಾತ್ರ ಮಾಡುವಾಗ ನಿಮಗೆ ರಾಜಕಾರಣಿ ಆಗಬೇಕೆಂಬ ಆಸೆ ಇತ್ತೇ? ಎಂದು ಸಭಿಕರೊ­ಬ್ಬರು ರೈಗೆ ಪ್ರಶ್ನಿಸಿದರು. ಅದಕ್ಕೆ ಅವರು, ‘ಅಲ್ಲಾರಿ, ಯಾವುದೋ ಒಂದು ಸಿನಿಮಾದಲ್ಲಿ ರೇಪ್‌ ಸೀನ್‌ ಮಾಡಬೇಕಾಗಿರುತ್ತದೆ. ನೀವು ಹೀಗೆ ಕೇಳಿದರೆ ಏನು ಅರ್ಥ?’ ಎಂದು ಮರುಪ್ರಶ್ನೆ ಹಾಕಿದರು.

ಅರ್ಥ ಮಾಡಿಕೊಳ್ಳುವ ಸಿನಿಮಾ ಮಾಡೋಣ
ನಮ್ಮ ಸಿನಿಮಾಗಳು ಹಾಲಿವುಡ್‌ಗೆ ಏಕೆ ಹೋಗಬೇಕು. ಅದೊಂದು ಮಾಪ­ಕವೇ? ಅರ್ಥ­ವಾಗದಿದ್ದವರಿಗೆ ತೋರಿ ಸು­ವುದ­ಕ್ಕಿಂತ ನಾವು ಮೊದಲು ಅರ್ಥ ಮಾಡಿ­ಕೊಳ್ಳುವ ಸಿನಿಮಾ ಮಾಡೋಣ.–ಪ್ರಕಾಶ ರೈ

ಆಸ್ಕರ್‌ಗೆ ತಲೆಕೆಡಿಸಿಕೊಳ್ಳದಿರಿ
ಭಾರತೀಯ ಸಿನಿಮಾಗಳಿಗೆ ಆಸ್ಕರ್‌ ಸಿಗದಿರುವುದಕ್ಕೆ ತಲೆ ಏಕೆ ಕೆಡಿಸಿಕೊಳ್ಳ­ಬೇಕು. ಅಗಾಧವಾದ ಪ್ರೇಕ್ಷಕರ ಮಾನದಂಡ ಸಾಕಲ್ಲವೇ?  – ಗಿರೀಶ್ ಕಾರ್ನಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.