ADVERTISEMENT

ಕಾವೇರಿ ನೀರು ಕುಡಿಯಲು ಮಾತ್ರ

ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2016, 8:56 IST
Last Updated 24 ಸೆಪ್ಟೆಂಬರ್ 2016, 8:56 IST
ಕಾವೇರಿ ನೀರು ಕುಡಿಯಲು ಮಾತ್ರ
ಕಾವೇರಿ ನೀರು ಕುಡಿಯಲು ಮಾತ್ರ   

ಬೆಂಗಳೂರು: ‘ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ ಸದ್ಯ ಸಂಗ್ರಹವಿರುವ ನೀರನ್ನು   ಕುಡಿಯುವುದಕ್ಕೆ ವಿನಾ ಬೇರೆ ಉದ್ದೇಶಗಳಿಗೆ ಪೂರೈಸುವುದಿಲ್ಲ’  ಎಂಬ ನಿರ್ಣಯವನ್ನು ಶುಕ್ರವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳೂ ಸರ್ವಾನುಮತದಿಂದ ಅಂಗೀಕರಿಸಿವೆ.

ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಆರು ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ಸೆ. 20ರಂದು ನೀಡಿರುವ ಆದೇಶ ಹಾಗೂ ಅದರ ಸಾಧಕ– ಬಾಧಕ ಕುರಿತು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿತ್ತು.

ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ನಡುವೆ ಕಾವೇರಿ ನದಿ ನೀರು ಹಂಚಿಕೆ ಮಾಡಲು 1990ರಲ್ಲಿ ನ್ಯಾಯಮಂಡಳಿ ರಚನೆಯಾದ ಬಳಿಕ ರಾಜ್ಯ ವಿಧಾನಮಂಡಲ ಈ ರೀತಿ ನಿರ್ಣಯ ಅಂಗೀಕರಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್‌.ವಿ. ದತ್ತ, ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಎಸ್‌. ರವಿ ಅವರು, ‘ಕುಡಿಯುವ ಉದ್ದೇಶಕ್ಕೆ ಹೊರತುಪಡಿಸಿ ಅನ್ಯ ಕಾರಣಕ್ಕೆ ನೀರು ಒದಗಿಸಲು ಸಾಧ್ಯವಿಲ್ಲ’ ಎಂಬ ನಿರ್ಣಯ ಮಂಡಿಸಿದರು. ವಿಧಾನಸಭೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ,  ವಿಧಾನಪರಿಷತ್ತಿನಲ್ಲಿ ವಿ.ಎಸ್‌. ಉಗ್ರಪ್ಪ ನಿರ್ಣಯಕ್ಕೆ ಅನುಮೋದನೆ ನೀಡಿದರು.

‘ಸಾಂಬಾ ಬೆಳೆಗೆ ನೀರು ಬಿಡುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ನಮಗೆ ಕುಡಿಯುವ ನೀರಿಲ್ಲದೆ ಇರುವಾಗ ಅವರಿಗೆ ನೀರು ಬಿಡುವುದು ಬೇಡ. ನೀವು ಬದುಕಿ, ಬೇರೆಯವರಿಗೆ ಬದುಕಲು ಬಿಡಿ ಎಂದು ಹೇಳಿದ್ದ ಸುಪ್ರೀಂಕೋರ್ಟ್‌, ಮೇಲಿಂದ ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸಂವಿಧಾನ ಬಾಹಿರ’ ಎಂದು ಆಡಳಿತ  ಮತ್ತು ವಿರೋಧ ಪಕ್ಷಗಳ ನಾಯಕರು ಟೀಕಿಸಿದರು.

ನಿರ್ಣಯ ಅಂಗೀಕಾರಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ‘ನ್ಯಾಯಾಲಯದ ಆದೇಶಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದ ಸದನ ಈ ನಿರ್ಣಯ ಅಂಗೀಕರಿಸುತ್ತಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡು ಬಂದವನು ನಾನು. 40 ವರ್ಷದಿಂದ ರಾಜಕೀಯದಲ್ಲಿರುವ ನನಗೆ  ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಬಗ್ಗೆ ಅಪಾರವಾದ ನಂಬಿಕೆ ಇದೆ. ನ್ಯಾಯಾಲಯದ ಆದೇಶ ಪಾಲಿಸುವುದು ರಾಜಕೀಯ ಧರ್ಮ.

ಯಾರಿಗೂ ಅಗೌರವ ತೋರುವ ಉದ್ದೇಶ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದು, ನಮ್ಮ ರಾಜ್ಯವನ್ನು ಉಳಿಸಬೇಕಾದ ಅನಿವಾರ್ಯ ಎದುರಾಗಿದೆ’ ಎಂದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ನೀರಿನ ಕೊರತೆ ಯಾವ ಕಾಲದಲ್ಲಿಯೂ ಆಗಿರಲಿಲ್ಲ. ಆದರೂ ಸೆ.5 ಮತ್ತು ಸೆ.12ರಂದು ಸುಪ್ರೀಂಕೋರ್ಟ್‌ ನೀಡಿದ ಆದೇಶವನ್ನು ಗೌರವಯುತವಾಗಿ ಪಾಲಿಸಿದ್ದೇವೆ. 6 ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂದು ಸೆ.20ರಂದು ನೀಡಿದ ಆದೇಶವನ್ನು ಪಾಲನೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

‘15 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂಕೋರ್ಟ್‌ ಆದೇಶಿದಾಗ ಕೇವಲ 47 ಟಿಎಂಸಿ ಅಡಿ ನೀರಿತ್ತು. ಅತ್ಯಂತ ಕಷ್ಟಕರ ಸ್ಥಿತಿಯಲ್ಲಿ ಆದೇಶ ಪಾಲಿಸಿದ್ದರಿಂದಾಗಿ ಈಗ ನೀರಿನ ಸಂಗ್ರಹ 27.06ಟಿಎಂಸಿ ಅಡಿಗೆ ಇಳಿದಿದೆ. ನಾವೆಲ್ಲರೂ ರೈತರ ಹಿತ ಕಾಪಾಡುವುದಾಗಿ ವಾಗ್ದಾನ ಮಾಡಿದ್ದೇವೆ. ಕೃಷಿಗೆ ನೀರು ಕೊಡದಿದ್ದರೂ ಜನರಿಗೆ ಕುಡಿಯಲು ನೀರು ಕೊಡುವುದು ನಮ್ಮೆಲ್ಲರ  ಜವಾಬ್ದಾರಿ’ ಎಂದರು.

‘ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸದನದ ತೀರ್ಮಾನ ಏನು ಎಂದು ಕೇಳಲು ವಿಶೇಷ ಅಧಿವೇಶನ ಕರೆಯಲಾಗಿದೆ. ಸದನ ಕೈಗೊಳ್ಳುವ ನಿರ್ಣಯಕ್ಕೆ ಸರ್ಕಾರ ಬದ್ಧವಾಗಿರುತ್ತದೆ ಎಂದು ರಾಜ್ಯದ ಜನತೆಗೆ ಮಾತುಕೊಡುತ್ತೇನೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳು ಜನಾದೇಶ ಧಿಕ್ಕರಿಸಲು ಆಗುವುದಿಲ್ಲ. ರಾಜ್ಯದ ಜನತೆಗೆ ಕುಡಿಯುವ ನೀರು ಕೊಡುವೆ, ಹಿತ ಕಾಪಾಡುವೆ ಎಂದು ಈ ಸದನದ ಸದಸ್ಯರು ವಾಗ್ದಾನ ಮಾಡಿದ್ದಿಂದಲೇ ಜನಾದೇಶ  ಸಿಕ್ಕಿದೆ. ಜನಾದೇಶ ಧಿಕ್ಕರಿಸಿದರೆ ಕರ್ತವ್ಯ ಲೋಪವಾಗಲಿದೆ. ಕರ್ತವ್ಯ ಪಾಲನೆ ಕೂಡ ಅತಿ ಮುಖ್ಯವಾದುದು ಎಂದು ಅವರು ಹೇಳಿದರು.

‘ಮಳೆಯ ತೀವ್ರ ಕೊರತೆಯಿಂದಾಗಿ ಸಂಕಷ್ಟದ ಸ್ಥಿತಿಯಲ್ಲಿ ನಾವಿದ್ದೇವೆ. 176 ತಾಲ್ಲೂಕುಗಳಲ್ಲಿ  ಕಳೆದ ವರ್ಷ 136 ತಾಲ್ಲೂಕುಗಳು ಬರ ಪೀಡಿತವಾಗಿದ್ದವು.  ಈ ವರ್ಷವೂ ಅತ್ಯಂತ ಕಷ್ಟದ ಸನ್ನಿವೇಶ  ಎಂದು ಹೇಳಿದರು.

ನಿರ್ಣಯದ ಪೂರ್ಣ ಪಾಠ
2016–17ನೇ ಜಲ ವರ್ಷದಲ್ಲಿ ಸಂಕಷ್ಟದ ಗಂಭೀರ ಪರಿಸ್ಥಿತಿ ಇರುವುದನ್ನು ಸದನ ತೀವ್ರ ಆತಂಕದಿಂದ ಗಮನಿಸಿದೆ. ಆದರೆ, ನೀರಿನ ಕೊರತೆಯ ಪ್ರಮಾಣವೇನು ಎಂಬುದು ಈ ಋತುವಿನ ಅಂತ್ಯ ಅಂದರೆ ಬರುವ ಜನವರಿ 31ರ  ನಂತರವೇ ಸ್ಪಷ್ಟವಾಗಿ ತಿಳಿಯಲಿದೆ  ಎಂಬ ಸಂಗತಿಯನ್ನೂ ಸದನ ಪರಿಗಣಿಸಿದೆ.

ಕಾವೇರಿಕೊಳ್ಳದ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿಯಲ್ಲಿ ನೀರು ಅತ್ಯಂತ ತಳಮಟ್ಟ ಮುಟ್ಟಿದ್ದು ಕೇವಲ 27.6 ಟಿಎಂಸಿ ಅಡಿ ಮಾತ್ರ ಸಂಗ್ರಹವಿರುವುದು ಮತ್ತೊಂದು ಆತಂಕದ ವಿಷಯ. ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ಅವಶ್ಯಕತೆಗೆ ಮಾತ್ರ ಈ ಜಲಾಶಯಗಳ ಸಂಗ್ರಹ ನೀರನ್ನು ಬಳಸುವುದು ಅತ್ಯವಶ್ಯಕ ಮತ್ತು ಅನಿವಾರ್ಯ ಎಂಬುದನ್ನು ಸರ್ಕಾರ ಖಾತರಿಪಡಿಸಿಕೊಳ್ಳಬೇಕೆಂದು ಸದನ ನಿರ್ಣಯಿಸುತ್ತದೆ. 

ಹೀಗಾಗಿ ಜಲಾಶಯಗಳಲ್ಲಿ ಈಗಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಕೊಳ್ಳದ ಜನರ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಮೀಸಲಿಡಬೇಕೇ ವಿನಾ ಬೇರೆ ಯಾವುದೇ ಉದ್ದೇಶಗಳಿಗೆ ಪೂರೈಸಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸುತ್ತದೆ. ನಿರ್ಣಯದಲ್ಲಿ ಎಲ್ಲಿಯೂ ಕೂಡ ತಮಿಳುನಾಡಿನ ಹೆಸರು ಉಲ್ಲೇಖ ಆಗಿಲ್ಲ.

ಸಿದ್ದರಾಮಯ್ಯ ನೀಡಿದ ಅಂಕಿ ಅಂಶ
* ಕಳೆದ 41 ವರ್ಷಗಳಲ್ಲಿ ಕಾವೇರಿಕೊಳ್ಳದ ಜಲಾಶಯಗಳಲ್ಲಿ  ಸರಾಸರಿ 254 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು

ADVERTISEMENT

* ಈ ವರ್ಷ 124 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಶೇ48ರಷ್ಟು ನೀರು ಕೊರತೆಯಾಗಿದೆ

* ನಾಲ್ಕೂ ಜಲಾಶಯಗಳಲ್ಲಿ 27.06 ಟಿಎಂಸಿ ಅಡಿ ನೀರು ಉಳಿದಿದೆ. ಮೇ ತಿಂಗಳ ಅಂತ್ಯದವರೆಗೆ 24.11 ಟಿಎಂಸಿ ಅಡಿ ನೀರು ಕುಡಿಯಲು ಬೇಕು

* ಮೆಟ್ಟೂರು ಜಲಾಶಯದಲ್ಲಿ 52 ಟಿಎಂಸಿ ಅಡಿ ನೀರಿದೆ.  ಸದ್ಯಕ್ಕೆ ಅವರಿಗೆ ಸಮಸ್ಯೆಯಾಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.