ADVERTISEMENT

ಕಿಮ್ಸ್‌ ವಾರ್ಡ್‌ಬಾಯ್‌–ಗಾಯಾಳು ನಡುವೆ ಗಲಾಟೆ

ಆಸ್ಪತ್ರೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದೃಶ್ಯ ಸೆರೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2017, 14:12 IST
Last Updated 23 ಫೆಬ್ರುವರಿ 2017, 14:12 IST
ಕಿಮ್ಸ್‌ ವಾರ್ಡ್‌ಬಾಯ್‌–ಗಾಯಾಳು ನಡುವೆ ಗಲಾಟೆ
ಕಿಮ್ಸ್‌ ವಾರ್ಡ್‌ಬಾಯ್‌–ಗಾಯಾಳು ನಡುವೆ ಗಲಾಟೆ   

ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ತೆರಳಿದ್ದ ಗಾಯಾಳು ಮತ್ತು ಕಿಮ್ಸ್‌ ವಾರ್ಡ್‌ಬಾಯ್‌ ನಡುವೆ ಗಲಾಟೆ ನಡೆದ ಘಟನೆ ನಗರದ ಕಿಮ್ಸ್‌ನಲ್ಲಿ ಗುರುವಾರ ನಡೆದಿದೆ. ಘಟನೆಯ ದೃಶ್ಯಾವಳಿ ಆಸ್ಪತ್ರೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಲ್ಲೂಕಿನ ಕುಸುಗಲ್‌ ರಸ್ತೆಯಲ್ಲಿ ಕ್ರೂಸರ್‌–ಬೊಲೆರೊ ವಾಹನದ ನಡುವೆ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಗದಗ ಜಿಲ್ಲೆಯ ಲಿಂಗದಾಳ ಗ್ರಾಮದ ಉಮೇಶ ಬಸವಣ್ಣೆಪ್ಪ ಸೇರಿದಂತೆ 12 ಮಂದಿ ಗಾಯಗೊಂಡು ಕಿಮ್ಸ್‌ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಡ್ರೆಸ್ಸಿಂಗ್‌ ಮಾಡಲು ಗಾಯಾಳು ಉಮೇಶ ಅವರನ್ನು ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಗಿತ್ತು.

ಅಪಘಾತದಲ್ಲಿ ತಲೆಗೆ ಪೆಟ್ಟಾಗಿದ್ದರಿಂದ ಉಮೇಶರ ತಲೆಗೂದನ್ನು ತೆಗೆಯಲು ವಾರ್ಡ್‌ಬಾಯ್‌ ಇಸ್ಮಾಯಿಲ್‌ ಪೀರಟ್‌ ಮುಂದಾಗಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕುಪಿತರಾದ ಇಸ್ಮಾಯಿಲ್‌ ಅಲ್ಲೇ ಇದ್ದ ಕಬ್ಬಿಣದ ರಾಡ್‌ವೊಂದನ್ನು ಎತ್ತಿಕೊಂಡು ಹಲ್ಲೆಗೆ ಮುಂದಾದರು. ಆದರೆ, ಆಸ್ಪತ್ರೆ ಸಿಬ್ಬಂದಿ ಅವರನ್ನು ತಡೆದರು. ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು.

ADVERTISEMENT

ಉಮೇಶ ಸೇರಿದಂತೆ ಅಪಘಾತದಲ್ಲಿ ಗಾಯಗೊಂಡವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.

‘ರೋಗಿಗಳು ಸಹನೆ ಕಳೆದುಕೊಂಡು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸಹಜ. ಆದರೆ, ಅದಕ್ಕೆ ಪ್ರತಿಯಾಗಿ ಸಿಬ್ಬಂದಿ ಹಲ್ಲೆ ನಡೆಸುವುದು ತಪ್ಪು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧರಿಸಿ, ತನಿಖೆ ನಡೆಸಲು ಆದೇಶಿಸುತ್ತೇನೆ. ತಪ್ಪು ಯಾರಿಂದ ಆಗಿದೆ ಎಂಬುದನ್ನು ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕಿಮ್ಸ್‌ ನಿರ್ದೆಶಕ ಡಾ.ದತ್ತಾತ್ರೇಯ ಬಂಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.