ADVERTISEMENT

ಕುಡಿಯಲು ಕೊಡುತ್ತಾರೆಂದು ಮತಾಂತರ!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 20:15 IST
Last Updated 25 ಫೆಬ್ರುವರಿ 2018, 20:15 IST
ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಪ್ರಮೋದ ಹೆಗಡೆ, ರಘುನಂದನ್‌, ಶಾಂತಣ್ಣ ಇದ್ದಾರೆ
ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಪ್ರಮೋದ ಹೆಗಡೆ, ರಘುನಂದನ್‌, ಶಾಂತಣ್ಣ ಇದ್ದಾರೆ   

ಬೆಳಗಾವಿ: ‘ನಮ್ಮ ಹಿಂದೂ ಯುವಕರು ಪ್ರತಿ ಭಾನುವಾರ ಚರ್ಚ್‌ಗಳಿಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಕುಡಿಯೋಕೆ ಕೊಟ್ಟು, ಜೊತೆಯಲ್ಲಿ ಕುಣಿಯಲು ಹುಡುಗಿಯರನ್ನೂ ಕೊಡುತ್ತಾರೆಂದು ಅಲ್ಲಿಗೆ ಹೋಗುತ್ತಿದ್ದಾರೆ. ಮತಾಂತರ ಮಾಡಲು ಇಂಥದೊಂದು ಹುನ್ನಾರ ನಡೆಯುತ್ತಿದೆ’ ಎಂದು ಕೊಲ್ಲಾಪುರ ಕನೇರಿಯ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಆರೋಪಿಸಿದರು.

ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರೀತಿಸಿದ ಯುವತಿಯನ್ನು ಮದುವೆಯಾಗಬೇಕೆಂದರೆ ತಮ್ಮ ಧರ್ಮಕ್ಕೆ ಮತಾಂತರವಾಗಬೇಕು ಎಂಬ ಷರತ್ತು ವಿಧಿಸಲಾಗುತ್ತಿದ್ದು, ಚರ್ಚ್‌ಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ದೂರಿದರು.

‘ನಮ್ಮ ದೇವರುಗಳನ್ನು ಅವಮಾನಿಸುವುದು, ಚಿತ್ರಗಳ ಮೂಲಕ ಕೆಟ್ಟದಾಗಿ ಬಿಂಬಿಸುವುದು ಸಾಮಾನ್ಯವಾಗಿದೆ. ಫಾದರ್‌ಗಳು ಕೂಡ ಕಾವಿ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಚರ್ಚ್‌ಗಳನ್ನು ದೇವಾಲಯ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಮಾರಿಯಮ್ಮ ದೇವಾಲಯ ಎಂದು ಕರೆದು, ಅರೆ! ಇದು ನಮ್ಮದಾ? ಎಂಬ ಭಾವನೆ ಮೂಡಿಸಲಾಗುತ್ತಿದೆ’ ಎಂದರು.

ADVERTISEMENT

ಧರ್ಮದ್ರೋಹಿಗಳು:

‘ದೇಶದಲ್ಲಿ ಅಸ್ಪೃಶ್ಯತೆ ಪಿಡುಗು ಹಿಂದಿನಷ್ಟು ಪ್ರಮಾಣದಲ್ಲಿ ಇಲ್ಲ. ನಮ್ಮ ನಡುವೆ ಇಂದಿಗೂ ಇರುವ ಬ್ರಿಟಿಷರು ಹಾಗೂ ಮೊಘಲರ ಪ್ರತಿನಿಧಿಗಳು, ಹಿಂದೆ ಆಗಿಹೋಗಿರುವ ಘಟನೆಗಳನ್ನು ವೈಭವೀಕರಿಸಿ ಇಲ್ಲದ ಭೂತಗಳನ್ನು ಮನಸ್ಸಿನಲ್ಲಿ ಹಾಕುತ್ತಿದ್ದಾರೆ. ನಿಮಗೆ ತೊಂದರೆ ನೀಡಿದ್ದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿ ಬೆಂಕಿ ಹಚ್ಚುತ್ತಿದ್ದಾರೆ. ತೊಂದರೆ ನೀಡಿದವರು ಹಾಗೂ ಒಳಗಾದವರು ಈಗ ಇಲ್ಲ. ನಾವೆಲ್ಲರೂ ಸಾಮರಸ್ಯದಿಂದ ಇರಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಸಮಾಜವನ್ನು ಹಾಳು ಮಾಡಲು ಕೆಲವರು ಹಾತೊರೆಯುತ್ತಿದ್ದಾರೆ. ಬಹಳಷ್ಟು ಭಾಷಣಕಾರರು ಮಾತ್ರವಲ್ಲದೆ ಪ್ರವಚನಕಾರರೂ ಈ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ರೋಹಿಗಳಾಗುವಂತೆ ಪ್ರಚೋದಿಸುತ್ತಿದ್ದಾರೆ’ ಎಂದು ಕಾಡಸಿದ್ಧೇಶ್ವರ ಸ್ವಾಮೀಜಿ ವಿಷಾದಿಸಿದರು.

ಕಪಾಳಕ್ಕೆ ಬಾರಿಸಬೇಕು:

‘ಅಂಧಶ್ರದ್ಧೆ ತೊಲಗಿಸುವ ಹೆಸರಿನಲ್ಲೂ ಧರ್ಮದ್ರೋಹದ ಕೆಲಸ ನಡೆಯುತ್ತಿದೆ. ಅಂಥವರ ಭಾಷಣಗಳಿಗೆ ನಮ್ಮಲ್ಲಿಯೇ ಕೆಲವರು ಚಪ್ಪಾಳೆ ಹಾಕುತ್ತಾರೆ. ವಿದ್ರೋಹದ ಮಾತು ಆಡುವವರಿಗೆ ಚಪ್ಪಾಳೆ ಹಾಕಬಾರದು. ಕಪಾಳಕ್ಕೆ ಬಾರಿಸಬೇಕು’ ಎಂದರು.

‘ಧರ್ಮನಿಂದನೆ ಮಾಡುವವರ ವಿಚಾರದಲ್ಲಿ ನಾವು ಹೇಡಿಗಳಾಗಬಾರದು. ಯಾವ ಧರ್ಮದಲ್ಲಿ ಲೋಪದೋಷಗಳು ಇಲ್ಲ? ನಮ್ಮಲ್ಲಿ ಅಸ್ಪೃಶ್ಯತೆ ಆಚರಣೆಯೇ ದೊಡ್ಡ ದೋಷ. ಅದನ್ನು ಹೋಗಲಾಡಿಸಲು ಮಠಾಧೀಶರು ಮುಂದಾಗಬೇಕು. ದಲಿತರ ಕೇರಿಗಳಿಗೆ ಹೋಗಬೇಕು. ಅವರ ಮನೆಗಳಲ್ಲಿ ಪ್ರಸಾದ ಸ್ವೀಕರಿಸಬೇಕು. ಭಜನೆ ಕಾರ್ಯಕ್ರಮ ನಡೆಸಬೇಕು. ಅವರನ್ನು ಅಪ್ಪಿಕೊಳ್ಳಬೇಕು. ನಾಯಿ, ಬೆಕ್ಕುಗಳನ್ನು ಮನೆಯೊಳಗೆ ಸೇರಿಸುತ್ತೇವೆ. ಹೀಗಿರುವಾಗ ಮನುಷ್ಯರ ವಿಚಾರದಲ್ಲಿ ತಾರತಮ್ಯ ಸಲ್ಲದು. ಎಲ್ಲರನ್ನೂ ಮನುಷ್ಯರಂತೆ ಕಾಣಬೇಕು. ವಿಶ್ವವೇ ನಮ್ಮ ಮನೆ ಎಂದುಕೊಂಡು ಬಂದವರು ನಾವು ಎನ್ನುವುದನ್ನು ಮರೆಯಬಾರದು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ವಿಎಚ್‌ಪಿ ಪ್ರಮುಖ ರಘುನಂದನ್, ‘ದಾರಿ ತಪ್ಪುತ್ತಿರುವ ಸಮಾಜಕ್ಕೆ ಸಂತರ ಮಾರ್ಗದರ್ಶನದ ಅಗತ್ಯವಿದೆ’ ಎಂದರು.

* ಮತಾಂತರ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಬ್ರಾಹ್ಮಣರಲ್ಲಿ ಶೇ 6 ಹಾಗೂ ಲಿಂಗಾಯತರಲ್ಲಿ ಶೇ 8ರಷ್ಟು ಮಂದಿ ಮತಾಂತರ ಹೊಂದುತ್ತಿದ್ದಾರೆ.
– ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.