ADVERTISEMENT

ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:31 IST
Last Updated 17 ಮೇ 2017, 19:31 IST
ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು
ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು   

ಬೆಂಗಳೂರು: ‘ಜಂತಕಲ್  ಎಂಟರ್‌ಪ್ರೈಸಸ್‌’ಗೆ ಅಕ್ರಮವಾಗಿ ಅದಿರು ಸಾಗಿಸಲು ಅನುಮತಿ ನೀಡಿದ್ದ’ ಸಂಬಂಧ ಬಂಧನದ ಭೀತಿಯಲ್ಲಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪ್ರಕರಣದಿಂದ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ನಿರೀಕ್ಷಣಾ ಜಾಮೀನು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 53ನೇ ಸಿಟಿ ಸಿವಿಲ್‌ ನ್ಯಾಯಾಲಯವು ಮಾನ್ಯ ಮಾಡಿದ್ದು, ಏಳು ದಿನಗಳವರೆಗೆ (ಮೇ 24ರವರೆಗೆ) ಷರತ್ತುಬದ್ಧ ತಾತ್ಕಾಲಿಕ ಜಾಮೀನು ನೀಡಿ ಬುಧವಾರ ಆದೇಶ ಹೊರಡಿಸಿದೆ. 

ವಿಚಾರಣೆ ನಡೆಸಿದ ನ್ಯಾ. ವನಮಾಲಾ ಆನಂದರಾವ್‌, ‘ಅರ್ಜಿದಾರರು (ಕುಮಾರಸ್ವಾಮಿ) ವೈಯಕ್ತಿಕ ₹2 ಲಕ್ಷ ಮೊತ್ತದ ಹಾಗೂ ಇಬ್ಬರು ಪರಿಚಯಸ್ಥರಿಂದ ತಲಾ ₹2.5 ಲಕ್ಷ ಶ್ಯೂರಿಟಿ ಕೊಡಬೇಕು. ದೇಶ ಬಿಟ್ಟು ಹೋಗಬಾರದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಹಾಗೂ ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕು’ ಎಂಬ ಷರತ್ತು ವಿಧಿಸಿದರು. ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದರು.

ADVERTISEMENT

ಎಸ್‌ಐಟಿ ಪರ ವಕೀಲ ಗೋವಿಂದನ್‌, ‘ಇದೊಂದು ಗಂಭೀರ ಪ್ರಕರಣವಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರಲಿದೆ. ಆರೋಪಿಗಳಿಂದ ಪ್ರಕರಣದ ಸಾಕ್ಷಿಗಳು ನಾಶವಾಗುವ ಭೀತಿ ಇದೆ ಎಂದರು. 

ಪ್ರತಿಯಾಗಿ ಮಾತನಾಡಿದ ವಕೀಲ ಹಷ್ಪತ್‌ ಪಾಷಾ, ‘ಅಕ್ರಮ ಗಣಿಗಾರಿಕೆಯ ಹಲವು ಪ್ರಕರಣಗಳಲ್ಲಿ ಕಕ್ಷಿದಾರರಿಗೆ (ಕುಮಾರಸ್ವಾಮಿ) ಜಾಮೀನು ಸಿಕ್ಕಿದೆ. ಅವೆಲ್ಲ ಪ್ರಕರಣಗಳ ವಿಚಾರಣೆಗೆ ತಪ್ಪದೇ ಹಾಜರಾಗುತ್ತಿದ್ದಾರೆ. ಯಾರ ಮೇಲೆಯೂ ಪ್ರಭಾವ ಬೀರಿಲ್ಲ’ ಎಂದರು.

‘ರಾಜಕೀಯ ಪಿತೂರಿ: ಟೀಕೆ’
ರಾಯಚೂರು:
‘ಜಂತಕಲ್‌ ಗಣಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ಕನೇ ಬಾರಿಗೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇನೆ. ಇದು ಹೊಸದೇನಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಹೇಳಿದರು.

‘ಒಂದೇ ಪ್ರಕರಣಕ್ಕೆ ನಾಲ್ಕು ರೀತಿಯಲ್ಲಿ ಎಫ್‌ಐಆರ್‌ ಹಾಕಿಕೊಂಡಿದ್ದಾರೆ. ಕೆಲ ಸತ್ಯಾಂಶವನ್ನು ಈಗ ಬಹಿರಂಗಗೊಳಿಸಲು ಸಾಧ್ಯವಾಗುವುದಿಲ್ಲ. ಒಂದು ಕಡೆಗೆ ತನಿಖೆ ನಡೆಯುತ್ತಿದೆ. ಮತ್ತೊಂದು ಕಡೆ ನ್ಯಾಯಾಲಯ ನಿರ್ದೇಶನ ನೀಡುತ್ತಿದೆ. ಆದರೆ, ಏನೇ ಮಾಡಿದರೂ ದಾಖಲೆಗಳನ್ನು ಕದಿಯುವುದಕ್ಕೆ ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಏನು ತೀರ್ಮಾನ ಕೈಗೊಳ್ಳಲಾಗಿದೆ ಎಂಬುದು ದಾಖಲೆಗಳಲ್ಲಿದೆ’ ಎಂದು  ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಬಿಎಸ್‌ವೈ ಕೈವಾಡ!’: ‘ನಾನು, ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹೋರಾಟ ಶುರು ಮಾಡಿದ ಮೇಲೆ ಜಂತಕಲ್‌ ಪ್ರಕರಣ ಆರಂಭವಾಯಿತು. ಬಹುಶಃ ಯಡಿಯೂರಪ್ಪ ಅವರೇ ಈ ಪ್ರಕರಣದ ಕಡತದ ಮೇಲೆ ಮುಖ್ಯಮಂತ್ರಿ ಒತ್ತಡ ಹಾಕಿದ್ದರು ಎನ್ನುವ ಸಾಲು ಬರೆಸಿರಬಹುದು ಎನ್ನುವ ಬಲವಾದ ಸಂಶಯ ನನ್ನಲ್ಲಿದೆ. ಮುಖ್ಯಮಂತ್ರಿಯಾಗಿದ್ದಾಗ ನಾನು ಗಂಗಾರಾಂ ಬಡೇರಿಯಾ ಅವರ ಮೇಲೆ ಒತ್ತಡ ಹಾಕಿದ್ದರೆ, ಅದನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬಹುದಾಗಿತ್ತು ಅಲ್ಲವೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.