ADVERTISEMENT

ಕೆಪಿಎಸ್‌ಸಿ ನೇಮಕ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 20:16 IST
Last Updated 21 ಜೂನ್ 2017, 20:16 IST
ಕೆಪಿಎಸ್‌ಸಿ ನೇಮಕ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಕಾರ
ಕೆಪಿಎಸ್‌ಸಿ ನೇಮಕ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಕಾರ   

ಬೆಂಗಳೂರು: 2011ರ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್‌ಸಿ) ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕೆಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್‌ ಸ್ಪಷ್ಟವಾಗಿ ನಿರಾಕರಿಸಿದೆ.

ಈ ಕುರಿತಂತೆ ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯ
ಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಜಾ ಮಾಡಿದೆ.

‘ಈ ಪ್ರಕರಣದ ಮೂಲ ಅರ್ಜಿಯನ್ನು ಅರ್ಹತೆ ಆಧಾರದ ಮೇಲೆ ಅತ್ಯಂತ ಜಾಗರೂಕವಾಗಿ ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಅಂತೆಯೇ ಈಗಾಗಲೇ ರಾಜ್ಯ ಸರ್ಕಾರದ ಇದೇ ಮಾದರಿಯ ಕೋರಿಕೆಯನ್ನು ತಳ್ಳಿ ಹಾಕಲಾಗಿದೆ. ಆದ್ದರಿಂದ ಈ ಅರ್ಜಿಯನ್ನೂ ವಜಾ ಮಾಡಲಾಗುತ್ತಿದೆ’ ಎಂದು ವಜಾಕ್ಕೆ ಕಾರಣ ನೀಡಲಾಗಿದೆ.

ADVERTISEMENT

ಪಿಐಎಲ್‌ ಆಧರಿಸಿ ತಡೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಆರ್‌.ರೇಣುಕಾಂಬಿಕೆ ಸೇರಿದಂತೆ  13 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಪೀಠ, ‘ಈ  ಪ್ರಕರಣದ ವಿಚಾರಣೆ ಮುಕ್ತಾಯವಾಗುವತನಕ 2011ರ ಸಾಲಿನಲ್ಲಿ ಆಯ್ಕೆಯಾದ ಯಾವುದೇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಬಾರದು’ ಎಂದು ಆದೇಶಿಸಿತ್ತು.

ಕೆಎಟಿ ಆದೇಶ: 2011ರಲ್ಲಿ 362 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು  ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2016ರ ಅಕ್ಟೋಬರ್‌ 19ರಂದು ವಜಾ ಮಾಡಿತ್ತು.

‘ಆಯ್ಕೆ ಪಟ್ಟಿ ರದ್ದುಗೊಳಿಸಿ ರಾಜ್ಯ ಸರ್ಕಾರ 2014ರ ಆಗಸ್ಟ್‌ 14ರಂದು ಹೊರಡಿಸಿದ ನಿರ್ಧಾರ ಕಾನೂನು ಬಾಹಿರವಾಗಿದೆ. ಈ ಆದೇಶ ಕೈಸೇರಿದ ಎರಡು ತಿಂಗಳ ಒಳಗಾಗಿ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಕೆಎಟಿ ನಿರ್ದೇಶಿಸಿತ್ತು.

ಈ ಆದೇಶದ ಅನ್ವಯ ರಾಜ್ಯ ಸರ್ಕಾರ 78 ಜನರಿಗೆ ನೇಮಕಾತಿ  ಪತ್ರ ನೀಡಿತ್ತು. ಇವರಿಗಿನ್ನೂ ಸಿಂಧುತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಅಷ್ಟರಲ್ಲಿಯೇ ಆದೇಶ ನೀಡಿಕೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್‌ ದಾಖಲಿಸಲಾಯಿತು. ಈ ಪಿಐಎಲ್‌ ವಿಚಾರಣೆ ನಡೆಸಿದ ಕೋರ್ಟ್‌ ನೇಮಕಾತಿ ಆದೇಶಕ್ಕೆ ತಡೆ ನೀಡಿದೆ.

ಮಧ್ಯಂತರ ಅರ್ಜಿ ವಜಾಕ್ಕೆ  ಕಾರಣಗಳು:
* ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಗೊತ್ತಿದ್ದರೂ ನೇಮಕ ಆದೇಶ ನೀಡಲು ಕೆಎಟಿ ಆದೇಶಿಸಿದ್ದು ಸರಿಯಲ್ಲ.
* ಆದೇಶ ನೀಡಲು ಹೊರಟಿದ್ದ ಸರ್ಕಾರದ ನಡೆ ಕುರುಡು ಹಾಗೂ ತದ್ವಿರುದ್ಧ  ಕ್ರಮಗಳಿಂದ ಕೂಡಿದೆ.
* ಯಾವ ಆಧಾರದಲ್ಲಿ ನೇಮಕ ಆದೇಶ ನೀಡಲಾಗುತ್ತಿದೆ ಎಂಬುದಕ್ಕೆ ಸರ್ಕಾರದ ಬಳಿ ಬಲವಾದ ಕಾರಣಗಳಿಲ್ಲ.
* ಸಿಐಡಿ ವರದಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
* ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್‌ ಅವರನ್ನು ಅಮಾನತುಗೊಳಿಸಿ ಪಟ್ಟಿಯನ್ನು ಹಿಂಪಡೆದಿದ್ದ ಸರ್ಕಾರ ಏಕಾಏಕಿ ಅದೇ ಪಟ್ಟಿ ಒಪ್ಪಿಕೊಳ್ಳುತ್ತಿದೆ ಎಂದರೆ ಏನರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.