ADVERTISEMENT

ಕೊಡಗಿನಲ್ಲಿ ಪ್ರವಾಹ: ಗುಡ್ಡ ಕುಸಿದು ಲಾರಿ ಕ್ಲೀನರ್‌ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 13:05 IST
Last Updated 13 ಜೂನ್ 2018, 13:05 IST
ಕೊಡಗಿನಲ್ಲಿ ಪ್ರವಾಹ: ಗುಡ್ಡ ಕುಸಿದು ಲಾರಿ ಕ್ಲೀನರ್‌ ಸಾವು
ಕೊಡಗಿನಲ್ಲಿ ಪ್ರವಾಹ: ಗುಡ್ಡ ಕುಸಿದು ಲಾರಿ ಕ್ಲೀನರ್‌ ಸಾವು   

ಮಡಿಕೇರಿ: ಕೊಡಗಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಣನೂರು– ಮಾಕುಟ್ಟ ಅಂತರರಾಜ್ಯ ಹೆದ್ದಾರಿಯ ಹನುಮಾನ್‌ ಪಾರೆ ಎಂಬಲ್ಲಿ ಬೃಹತ್‌ ಗುಡ್ಡ ಕುಸಿದು ಕರ್ನಾಟಕ- ಕೇರಳ ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕೇರಳಕ್ಕೆ ತೆರಳುವ ವಾಹನಗಳಿಗೆ ಕುಟ್ಟದ ಮೂಲಕ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಮರ ತೆರವು ಮಾಡುತ್ತಿದ್ದ ವೇಳೆ ಕೇರಳದ ಲಾರಿ ಕ್ಲೀನರ್‌ ಶರತ್‌ ಕುಮಾರ್‌ (27) ಮೇಲೆ ಮಣ್ಣು ಕುಸಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಮೂರು ವಾಹನಗಳ ಮೇಲೆ ಮರಬಿದ್ದು ಸಂಪೂರ್ಣ ಜಖಂಗೊಂಡಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಲಾರಿ ಹಳ್ಳಕ್ಕೆ ಬಿದ್ದಿದ್ದು ಮೇಲೆತ್ತಲು ಸಾಧ್ಯವಾಗಿಲ್ಲ.

ADVERTISEMENT

‘ವಿರಾಜಪೇಟೆ, ಪೆರುಂಬಾಡಿ, ಮಾಕುಟ್ಟದ ನಡುವೆ 20 ಸ್ಥಳಗಳಲ್ಲಿ ಮಣ್ಣು ಕುಸಿದಿದೆ. ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಅಲ್ಲಲ್ಲಿ ಬಿದ್ದ ಮಣ್ಣಿನ ರಾಶಿ, ಮರಗಳನ್ನು ತೆರವು ಮಾಡಲಾಗಿದೆ. ಹನುಮಾನ್‌ ಪಾರೆ ಬಳಿ ಬೃಹತ್‌ ಗುಡ್ಡ ಕುಸಿದಿರುವ ಪರಿಣಾಮ ಎರಡು ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯಾಣಿಕರಿಗೆ ತೊಂದರೆ: ಇಕ್ಕಾಟದ ರಸ್ತೆಯಲ್ಲಿ ರಾತ್ರಿ ವೇಳೆ ಗುಡ್ಡ ಕುಸಿದ ಪರಿಣಾಮ ಎರಡು ಬದಿಯಲ್ಲೂ 50ಕ್ಕೂ ಹೆಚ್ಚು ವಾಹನಗಳು ನಿಂತಿದ್ದವು. ಮಳೆಯಲ್ಲೇ ಪ್ರಯಾಣಿಕರು, ವಾಹನ ಚಾಲಕರು ಕಾಲಕಳೆದರು. ಮಧ್ಯಾಹ್ನದ ವೇಳೆಗೆ ಅಲ್ಲಲ್ಲಿ ಮಣ್ಣು ತೆರವು ಮಾಡಿ ಪರ್ಯಾಯ ಮಾರ್ಗದಲ್ಲಿ ವಾಹನಗಳನ್ನು ಕಳುಹಿಸಲಾಯಿತು. ಕಿರಿದಾದ ರಸ್ತೆಯಿರುವ ಕಾರಣ ಸರಕು ಸಾಗಣೆ ಲಾರಿಗಳು ಮಾತ್ರ ರಸ್ತೆಯಲ್ಲಿ ನಿಂತಿವೆ. ಶಾಸಕ ಕೆ.ಜಿ. ಬೋಪಯ್ಯ ಸ್ಥಳ ಪರಿಶೀಲನೆ ನಡೆಸಿದರು.

ತೆರಾಲು, ಪೂಕೊಳ, ಬಿರುನಾಣಿ, ಟಿ.ಶೆಟ್ಟಿಗೇರಿ, ಕುರ್ಚಿ, ಶ್ರೀಮಂಗಲ, ಹುದಿಕೇರಿಯಲ್ಲಿ ಸುರಿಯುತ್ತಿರುವ ಮಳೆಗೆ ಕಾವೇರಿ ನದಿಯ ಒಡಲು ಸೇರುವ ಲಕ್ಷ್ಮಣ ತೀರ್ಥ ನದಿಯು ಜಿಲ್ಲೆಯಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೆ.ಕೆ.ಆರ್ ಹೊಳೆಯಲ್ಲಿ ಪ್ರವಾಹ ಹೆಚ್ಚಾಗಿದೆ. ವಿದ್ಯುತ್‌ ಕಂಬಗಳು ಉರುಳಿದ್ದು ಬಿರುನಾಣಿ ವ್ಯಾಪ್ತಿಯ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.

ಟಿ.ಶೆಟ್ಟಿಗೇರಿ ಮತ್ತು ಬಿರುನಾಣಿ ಮಾರ್ಗದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಬರಪೊಳೆ ಉಕ್ಕಿ ಹರಿಯುತ್ತಿದೆ. ಟಿ. ಶೆಟ್ಟಿಗೇರಿ, ಶ್ರೀಮಂಗಲ ಹಾಗೂ ಕೊಟ್ಟಗೇರಿ, ಬಾಳೆಲೆ ನಡುವೆಯ ಸೇತುವೆ ಮುಳುಗಡೆ ಆಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿ ಭಾಗದಲ್ಲೂ ವ್ಯಾಪಕ ಮಳೆ ಸುರಿಯುತ್ತಿದೆ.

ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹರಿಹರ ಭಾಗದಲ್ಲಿ ಮಳೆ ಪ್ರಮಾಣ ತೀವ್ರಗೊಂಡಿರುವುದರಿಂದ ಪ್ರವಾಹ ಏರಿಕೆ ಆಗುತ್ತಲೇ ಇದೆ. ವಿ. ಬಾಡಗ ಬಳಿ ರಸ್ತೆ ಕೊಚ್ಚಿ ಹೋಗಿದೆ. ಒಂದೇ ದಿನ ಹಾರಂಗಿ ಜಲಾಶಯಕ್ಕೆ 5 ಅಡಿಯಷ್ಟು ನೀರು ಹರಿದು ಬಂದಿದೆ. ವಿರಾಜಪೇಟೆ ತಾಲ್ಲೂಕಿನಾದ್ಯಂತ ಬುಧವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ  102.65 ಮಿ.ಮೀ ಮಳೆ ಸುರಿದಿದೆ. ಶ್ರೀಮಂಗಲ 320, ಹುದಿಕೇರಿ 318, ಪೊನ್ನಂಪೇಟೆ 225.20, ಭಾಗಮಂಡಲ 131.40, ನಾಪೋಕ್ಲು 194.40, ಶಾಂತಳ್ಳಿಯಲ್ಲಿ 85 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.