ADVERTISEMENT

ಕೊರತೆಯ 20 ಟಿಎಂಸಿ ಅಡಿ ನೀರಿಗೆ ಗುದ್ದಾಟ

ಹೊನಕೆರೆ ನಂಜುಂಡೇಗೌಡ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ಕೊರತೆಯ 20 ಟಿಎಂಸಿ ಅಡಿ ನೀರಿಗೆ ಗುದ್ದಾಟ
ಕೊರತೆಯ 20 ಟಿಎಂಸಿ ಅಡಿ ನೀರಿಗೆ ಗುದ್ದಾಟ   

ಬೆಂಗಳೂರು: ಮುಂಗಾರು ಮಳೆ ಅಭಾವದಿಂದಾಗಿ ಕರ್ನಾಟಕ ಹಾಗೂ ತಮಿಳುನಾಡಿಗೆ ಕೊರತೆ ಆಗಬಹುದೆಂದು ನಿರೀಕ್ಷಿಸಲಾಗಿರುವ ಕೇವಲ 15–20 ಟಿಎಂಸಿ ಅಡಿ ನೀರಿಗಾಗಿ ಉಭಯ ರಾಜ್ಯಗಳು ದೊಡ್ಡ ಕಾನೂನು ಹೋರಾಟ ನಡೆಸಲು ಸಜ್ಜಾಗಿವೆ.

ಸದ್ಯ ಕಾವೇರಿ ಕಣಿವೆ ಜಲಾಶಯಗಳಲ್ಲಿ 51ಟಿಎಂಸಿ ಅಡಿ ನೀರಿದೆ. ಮುಂಗಾರು ಅವಧಿ ಅಂತ್ಯಗೊಳ್ಳುವವರೆಗೆ ಇನ್ನೂ 40 ಟಿಎಂಸಿ ಅಡಿ ನೀರು ಜಲಾಶಯಗಳಿಗೆ ಹರಿದುಬರುವ ಅಂದಾಜಿದೆ.ಕುಡಿಯುವ ಉದ್ದೇಶದ 40ಟಿಎಂಸಿ ಅಡಿ ಸೇರಿದಂತೆ ಕರ್ನಾಟಕದ ಒಟ್ಟಾರೆ ಅಗತ್ಯ ಸುಮಾರು 110 ಟಿಎಂಸಿ ಅಡಿ.

ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗ 31ಟಿಎಂಸಿ ಅಡಿ ನೀರಿದೆ. ಮಳೆಗಾಲ ಮುಗಿಯುವವರೆಗೆ ಅಂತರ್‌ಕಣಿವೆಯಲ್ಲಿ (ಕಬಿನಿಯಿಂದ ಮೆಟ್ಟೂರುವರೆಗೆ) ಬೀಳುವ ಮಳೆಯಿಂದ ಇನ್ನೂ 60 ಟಿಎಂಸಿ ಅಡಿ ಜಲಾಶಯಕ್ಕೆ ಹರಿಯಲಿದೆ. ನೆರೆಯ ರಾಜ್ಯದ ಒಟ್ಟಾರೆ ಅಗತ್ಯ 100 ಟಿಎಂಸಿ ಅಡಿ.
ಎರಡೂ ರಾಜ್ಯಗಳ ಒಟ್ಟಾರೆ ನೀರು ಸೇರಿದರೆ 180 ಟಿಎಂಸಿ ಆಗಲಿದೆ. ಕೊರತೆ ಆಗುವ ಸುಮಾರು 20 ಟಿಎಂಸಿ ಅಡಿ ನೀರಿಗಾಗಿ ಎರಡೂ ರಾಜ್ಯಗಳು ಬಡಿದಾಡುತ್ತಿವೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾವೇರಿ ನೀರಿನ ವಿವಾದವನ್ನು ಕೊಡುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುವಂತೆ ಹಿರಿಯ ವಕೀಲ ಎಫ್‌.ಎಸ್‌.ನಾರಿಮನ್‌ ನೇತೃತ್ವದ ವಕೀಲರ ತಂಡ ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದೆ.

ವಕೀಲರ ಸಲಹೆಯಿಂದಾಗಿ ಅತ್ಯಂತ ಸಂಕಷ್ಟದ ನಡುವೆಯೂ ಕರ್ನಾಟಕ ತಮಿಳುನಾಡಿಗೆ 29 ಟಿಎಂಸಿ ಅಡಿ ನೀರು ಹರಿಸಿದೆ. ಕೆಆರ್‌ಎಸ್‌ ಮತ್ತು ಕಬಿನಿಯಿಂದ ಇದುವರೆಗೆ 42 ಟಿಎಂಸಿ ಅಡಿ ನೀರು ಬಿಡಲಾಗಿದೆ. ಅದರಲ್ಲಿ 12 ಟಿಎಂಸಿ ಅಡಿಯನ್ನು ಕರ್ನಾಟಕ ಬಳಸಿಕೊಂಡಿದೆ.

ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಪ್ರತಿದಿನ 8,889 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಕೆಆರ್‌ಎಸ್‌ನಿಂದ 6,400 ಮತ್ತು ಕಬಿನಿಯಿಂದ ಸುಮಾರು 2,500 ಕ್ಯುಸೆಕ್‌ ನೀರು ಹರಿದು ಹೋಗುತ್ತಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ ಗೆ ತಿಳಿಸಿವೆ.

ಹಿಂದಿನ ವರ್ಷ ಇದೇ ಅವಧಿಯಲ್ಲಿ 17 ಸಾವಿರ ಕ್ಯುಸೆಕ್‌ ನೀರನ್ನು ಜಲಾಶಯಗಳಿಂದ ಹೊರ ಬಿಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರಿಸ್ಥಿತಿ ಗಂಭೀರವಾಗಿದೆ.

ಕಾವೇರಿ ಕಣಿವೆಯ ಕೆಆರ್ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿಗೆ 11,235 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ಸಲ ಒಳ ಹರಿವು ಹೆಚ್ಚಿತ್ತು ಎಂದೂ ಮೂಲಗಳು ಖಚಿತಪಡಿಸಿವೆ.

‘ಎಷ್ಟೇ ಕಷ್ಟವಾದರೂ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಯುವಂತೆ ನೋಡಿಕೊಳ್ಳಿ. ನೀರು ಬಿಡುಗಡೆ ಮಾಡದಿದ್ದರೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ಅಷ್ಟಿಷ್ಟು ನೀರು ಬಿಡುಗಡೆ ಮಾಡುವುದರಿಂದ ಕೋರ್ಟ್‌ಗೆ ನಮ್ಮ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಬಹುದು’ ಎಂದೂ ನಾರಿಮನ್‌ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ತಮಿಳುನಾಡು ಸರ್ಕಾರ 50 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಸೆಪ್ಟೆಂಬರ್‌ 2ಕ್ಕೆ ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ನೆರೆಯ ರಾಜ್ಯಕ್ಕೆ ನೀರು ಹರಿಯುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದೂ ಮೂಲಗಳು ತಿಳಿಸಿವೆ.
*
ಕಾವೇರಿಯಿಂದ ಮೆಟ್ಟೂರು ವರೆಗೆ
* ಕಾವೇರಿ ಕಣಿವೆ 4 ಜಲಾಶಯಗಳ (ಕೆಆರ್‌ಎಸ್‌,  ಕಬಿನಿ, ಹಾರಂಗಿ  ಮತ್ತು  ಹೇಮಾವತಿ) ಒಟ್ಟು ಸಂಗ್ರಹ ಸಾಮರ್ಥ್ಯ 114 ಟಿಎಂಸಿ ಅಡಿ
* ಸಾಮಾನ್ಯ ಮಳೆ ವರ್ಷದಲ್ಲಿ ಬಳಕೆಗೆ ಲಭ್ಯವಾಗುವ ನೀರು  104 ಟಿಎಂಸಿ ಅಡಿ
* ಆಗಸ್ಟ್‌ ಅಂತ್ಯದವರೆಗೆ ಜಲಾಶಯಗಳಿಗೆ ಹರಿದು ಬರಬೇಕಿದ್ದ ನೀರು 195.25 ಟಿಎಂಸಿ ಅಡಿ

* ಆಗಸ್ಟ್‌ 24 ರವರೆಗೆ ಜಲಾಶಯಗಳಿಗೆ ಹರಿದು ಬಂದ ನೀರು  108ಟಿಎಂಸಿ ಅಡಿ
* ಜಲಾಶಯಗಳಲ್ಲಿ ಈಗ ಸಂಗ್ರಹವಾಗಿರುವ ನೀರು 51 ಟಿಎಂಸಿ ಅಡಿ.
* ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ ನಗರಗಳಿಗೆ ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವ ನೀರು  40 ಟಿಎಂಸಿ ಅಡಿ.

* ತಮಿಳುನಾಡಿಗೆ ಇದುವರೆಗೆ ಬಿಟ್ಟಿರುವ ನೀರು  29 ಟಿಎಂಸಿ ಅಡಿ.
* ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಲಭ್ಯವಿದ್ದ ನೀರು 34 ಟಿಎಂಸಿ ಅಡಿ.
* ಕಾವೇರಿ ಕಣಿವೆ 4 ಜಲಾಶಯಗಳಿಗೆ ಹರಿದು ಬರುತ್ತಿರುವ ನೀರು 11,235 ಕ್ಯುಸೆಕ್‌

* ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಂದ ಹೊರಬಿಡುತ್ತಿರುವ ನೀರು 8,889 ಕ್ಯುಸೆಕ್
* ಕಳೆದ ವರ್ಷ ಇದೆ ಸಮಯದಲ್ಲಿ  ಹೊರಗೆಹರಿದ  ನೀರು 17,000 ಕ್ಯುಸೆಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT