ADVERTISEMENT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೆ.ಟಿ.ನವೀನ್‌ ಅಕ್ರಮ ಬಂಧನ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 13:28 IST
Last Updated 25 ಏಪ್ರಿಲ್ 2018, 13:28 IST
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೆ.ಟಿ.ನವೀನ್‌ ಅಕ್ರಮ ಬಂಧನ ಆರೋಪ
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೆ.ಟಿ.ನವೀನ್‌ ಅಕ್ರಮ ಬಂಧನ ಆರೋಪ   

ಮಂಡ್ಯ: ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಕೆ.ಟಿ.ನವೀನ್‌ ಅವರ ಮೇಲೆ ಎಸ್‌ಐಟಿ ಅಧಿಕಾರಿಗಳು ಸುಳ್ಳು ಆರೋಪ ಹೊರಿಸಿ ಮೂರು ತಿಂಗಳಿಂದ ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದಾರೆ’ ಎಂದು ಮದ್ದೂರು ತಾಲ್ಲೂಕು ಕದಲೂರು ಗ್ರಾಮಸ್ಥ ಭೈರೇಗೌಡ ಹೇಳಿದರು.

‘ಕದಲೂರು ಗ್ರಾಮದ ನಿವಾಸಿಯಾದ ಕೆ.ಟಿ.ನವೀನ್‌ ಹಲವು ವರ್ಷಗಳಿಂದ ಸಾಮಾಜಿಕ ಹೋರಾಟದಲ್ಲಿ ತೊಡಗಿದ್ದರು. ಹಿಂದೂ ಪರ ಚಿಂತನೆ ಕುರಿತು ಅವರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಕ್ತದಾನ ಶಿಬಿರಗಳ ಮೂಲಕ ಹೆಸರುವಾಸಿಯಾಗಿದ್ದರು. ಮೂರು ತಿಂಗಳ ಹಿಂದೆ ಅವರನ್ನು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಯಿತು. ಯಾವುದೇ ಸಾಕ್ಷಿ ಇಲ್ಲದಿದ್ದರೂ ಎಸ್‌ಐಟಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದೆ. ಸಾಕ್ಷಿ ಇದ್ದರೆ ಕೂಡಲೇ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಬೇಕು. ಇಲ್ಲದಿದ್ದರೆ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸರ್ಕಾರ ರಾಜಕೀಯ ಲಾಭಕ್ಕಾಗಿ ಅಮಾಯಕನನ್ನು ಬಂಧಿಸಿದೆ. ಕೆ.ಟಿ.ನವೀನ್‌ ಹೆಸರನ್ನು ಪೊಲೀಸರು ಹೊಟ್ಟೆ ಮಂಜ ಎಂದೆಲ್ಲ ಬೇರೆ ಹೆಸರಿನಿಂದ ಬಿಂಬಿಸುತ್ತಿದ್ದಾರೆ. ಗೌರಿ ಹತ್ಯೆ ಪ್ರಕರಣದಲ್ಲಿ ನವೀನ್‌ ಒಬ್ಬರನ್ನು ಬಿಟ್ಟರೆ ಮತ್ಯಾರನ್ನೂ ಬಂಧಿಸಿಲ್ಲ. ಇದು ಅನುಮಾನ ಹುಟ್ಟಿಸುವಂತಿದೆ. ಈಗ ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ. ಮಂಪರು ಪರೀಕ್ಷೆಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಯಾವುದೇ ಸಾಕ್ಷಿ ಇಲ್ಲದಿದ್ದರೂ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲ. ಎಸ್‌ಐಟಿ ಅಧಿಕಾರಿಗಳು 15 ದಿನಗಳ ಒಳಗೆ ನವೀನ್‌ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಅಕ್ರಮ ಬಂಧನ ಆರೋಪ ಹೊರಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಲಾಗುವುದು. ಜತೆಗೆ ಎಸ್‌ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

ಕೆ.ಟಿ.ನವೀನ್‌ ಸಹೋದರ ಕೆ.ಟಿ.ತಿಮ್ಮೇಗೌಡ, ಕದಲೂರು ಗ್ರಾಮಸ್ಥರಾದ ಅಶೋಕ್‌, ಕೃಷ್ಣ, ಮನೋಹರ ಚಂದ್ರ, ರವಿ, ಪುಟ್ಟರಾಜ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.