ADVERTISEMENT

ಘಟಕದಲ್ಲೇ ಉಳಿಯುತ್ತಿವೆ ಮ್ಯಾಗಿ

ನೆಸ್ಲೆ ಮ್ಯಾಗಿ ನೂಡಲ್ಸ್‌ಗೆ ಕುಸಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 19:30 IST
Last Updated 4 ಜೂನ್ 2015, 19:30 IST

ಮೈಸೂರು: ‘ಮ್ಯಾಗಿ ನೂಡಲ್ಸ್‌’ಗೆ ಬೇಡಿಕೆ ಕುಸಿದ ಪರಿಣಾಮ ಜಿಲ್ಲೆಯ ನಂಜನಗೂಡಿನಲ್ಲಿರುವ ನೆಸ್ಲೆ ಕಂಪೆನಿಯ ಉತ್ಪಾದನಾ ಘಟಕದಲ್ಲಿ ಉತ್ಪನ್ನ ಹಾಗೆ ಉಳಿಯುತ್ತಿದೆ. ಮಳಿಗೆಗಳಿಗೆ ‘ಮ್ಯಾಗಿ ನೂಡಲ್ಸ್‌’ ವಿತರಣೆ ಎರಡು ದಿನಗಳಿಂದ ಸ್ಥಗಿತಗೊಂಡಿದೆ.

ನಂಜನಗೂಡಿನ ಕೈಗಾರಿಕಾ ವಲಯದಲ್ಲಿ 1989ರಲ್ಲಿ ನೆಸ್ಲೆ ಕಂಪೆನಿ ಅಸ್ತಿತಕ್ಕೆ ಬಂದಿದೆ. ದೊಡ್ಡ ಪ್ರಮಾಣ ಕೈಗಾರಿಕೆಯಾಗಿದ್ದು, ಸುಮಾರು 8 ಸಾವಿರಕ್ಕೂ ಅಧಿಕ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. 2011ರಲ್ಲಿ ‘ಮ್ಯಾಗಿ ನೂಡಲ್ಸ್‌’ ಘಟಕ ಆರಂಭವಾಗಿದ್ದು, ಸುಮಾರು 3 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2010ರಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಘಟಕ ಸ್ಥಾಪನೆಗೆ ಬಂಡವಾಳ ಹರಿದು ಬಂದಿತ್ತು. ನಿತ್ಯ ಇಲ್ಲಿ 70 ಟನ್‌ ಮ್ಯಾಗಿ ನೂಡಲ್ಸ್‌ ಉತ್ಪಾದನೆಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಮ್ಯಾಗಿ’ಯಲ್ಲಿ ವಿಷಕಾರಿ ಅಂಶವಿದೆ ಎಂಬ ಸುದ್ದಿ ಈ ಉತ್ಪನ್ನದ ಮಾರಾಟದ ಮೇಲೆ ಪರಿಣಾಮ ಬೀರಿದೆ. ಅನೇಕ ಮಳಿಗೆಗಳಲ್ಲಿ ಮ್ಯಾಗಿಯನ್ನು ಖರೀದಿಸಲು ಜನ ಹಿಂಜರಿಯುತ್ತಿದ್ದಾರೆ. ಹೀಗಾಗಿ, ಮ್ಯಾಗಿಗೆ ಬರುತ್ತಿದ್ದ ಬೇಡಿಕೆ ಸಂಪೂರ್ಣ ನೆಲಕಚ್ಚಿದೆ. ಎರಡು ದಿನಗಳಿಂದ ಉತ್ಪಾದನಾ ಘಟಕಗಳಿಂದ ಮ್ಯಾಗಿಯನ್ನು ತರುತ್ತಿಲ್ಲ. ಮಳಿಗೆಗಳಿಗೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ವಿತರಕರಲ್ಲಿ ಒಬ್ಬರಾದ ಶ್ರೀನಿವಾಸ ಅಂಡ್‌ ಕೋ ಸಂಸ್ಥೆಯ ಮಂಜುನಾಥ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.