ADVERTISEMENT

ಜರ್ಮನಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಮಂಜುನಾಥ ತಾಯಿ ಮಹಾನಂದಿ ಅವರ ರೋದನ
ಮಂಜುನಾಥ ತಾಯಿ ಮಹಾನಂದಿ ಅವರ ರೋದನ   

ಬಾಗಲಕೋಟೆ: ಉನ್ನತ ವ್ಯಾಸಂಗಕ್ಕೆ ಜರ್ಮನಿಗೆ ತೆರಳಿದ್ದ ತಾಲ್ಲೂಕಿನ ಸೀಮಿಕೇರಿಯ ಮಂಜುನಾಥ ಚೂರಿ (27) ನಿಗೂಢವಾಗಿ ಸೋಮವಾರದಿಂದ ನಾಪತ್ತೆಯಾಗಿದ್ದು ಇಲ್ಲಿರುವ ಅವರ ಮನೆಯವರು ಆತಂಕಗೊಂಡಿದ್ದಾರೆ.

ಜರ್ಮನಿಯ ಹ್ಯಾಂಬರ್ಗ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿರುವ ಅವರು ಸಿದ್ದಣ್ಣ ಚೂರಿ ಹಾಗೂ ಮಹಾನಂದಿ ದಂಪತಿಯ ಪುತ್ರ. 

ನಾಲ್ಕು ವರ್ಷಗಳ ಹಿಂದೆ ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಜುನಾಥ ಪದವಿ ಪೂರ್ಣಗೊಳಿಸಿದ್ದರು. ಎರಡು ವರ್ಷ  ಬೆಂಗಳೂರಿನ ಮೈಂಡ್‌ ಟ್ರೀ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ನಂತರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆರ್ಥಿಕ ನೆರವು ಪಡೆದು ಹೆಚ್ಚಿನ ವ್ಯಾಸಂಗಕ್ಕೆ 2015ರ ಸೆಪ್ಟೆಂಬರ್‌ನಲ್ಲಿ ಜರ್ಮನಿಗೆ ತೆರಳಿದ್ದರು.

ADVERTISEMENT

ರಾಯಭಾರ ಕಚೇರಿ ಮಾಹಿತಿ: ಹ್ಯಾಂಬರ್ಗ್‌ನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮಂಜುನಾಥ, ನಾಪತ್ತೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ. ಅಪಾರ್ಟ್‌ಮೆಂಟ್‌ ಹೊರಭಾಗದ ಬೀಗದ ಬಾಕ್ಸ್‌ನಲ್ಲಿ ಇಟ್ಟಿರುವುದಾಗಿ ಸಹಪಾಠಿ ಅನೀಶ್‌ ದೇಶಪಾಂಡೆಗೆ ಸಂದೇಶ ಕಳುಹಿಸಿದ್ದಾರೆ. ನಂತರ ಮೊಬೈಲ್‌ಫೋನ್‌ ಸ್ವಿಚ್‌ ಆಫ್‌ ಮಾಡಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಆಗಿನಿಂದ ಅವರು ಬಳಸುತ್ತಿದ್ದ ಸೈಕಲ್‌ ಕೂಡ ಕಾಣುತ್ತಿಲ್ಲ ಎನ್ನಲಾಗಿದೆ.

ಗೆಳೆಯನ ನಾಪತ್ತೆ ಬಗ್ಗೆ ಅನೀಶ್‌, ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಜರ್ಮನಿಯಲ್ಲಿನ ಭಾರತೀಯ ರಾಯಭಾರ ಕಚೇರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನೊಂದಿದ್ದ: ‘ಪತಿ ಸಿದ್ದಣ್ಣ ಚೂರಿ ನವೆಂಬರ್ 21ರಂದು ಅಪಘಾತದಲ್ಲಿ ಸಾವಿಗೀಡಾಗಿದ್ದರು. ತೋಟದಿಂದ ಮನೆಗೆ ಬೈಕ್‌ನಲ್ಲಿ ಬರುವಾಗ ಸಮೀಪದ ಆನದಿನ್ನಿ ಕ್ರಾಸ್‌ ಬಳಿ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಅಪ್ಪನ ಅಂತ್ಯಕ್ರಿಯೆಗೆ ಬಂದಿದ್ದ ಮಂಜುನಾಥ ಬಹಳ ನೊಂದುಕೊಂಡಿದ್ದ’ ಎಂದು ಮಹಾನಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ದಿನ ಮಧ್ಯಾಹ್ನ 12ರಿಂದ 12.30ರ ಒಳಗೆ ಮಗ ಕರೆ ಮಾಡುತ್ತಿದ್ದ. ಆದರೆ ಮೂರು ದಿನಗಳಿಂದ ಮಾಡಿಲ್ಲ. ಸೋಮವಾರ ರಾತ್ರಿ 9.30ಕ್ಕೆ ಕರೆ ಮಾಡಿದ್ದ ಜರ್ಮನಿಯ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಆತ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದರು.

ಸುಷ್ಮಾ ಗಮನ ಸೆಳೆವ ಯತ್ನ: ‘ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಗಮನ ಸೆಳೆದು ಮಗನ ಪತ್ತೆಗೆ ನೆರವು ಪಡೆಯುವ ಪ್ರಯತ್ನ ಮುಂದುವರಿಸಿದ್ದೇವೆ. ಜಿಲ್ಲಾಡಳಿತಕ್ಕೂ ಮೊರೆ ಹೋಗಿದ್ದೇವೆ. ನಾಪತ್ತೆಗೂ ಮುನ್ನ ಮಗ ಕನ್ನಡದಲ್ಲಿ ಪತ್ರ ಬರೆದಿದ್ದಾನೆ ಎನ್ನಲಾಗಿದೆ. ಆದರೆ ಅದರಲ್ಲಿ ಏನು ಬರೆಯಲಾಗಿದೆ ಎಂದು ತಿಳಿಯಲು ಅಲ್ಲಿನ  ರಾಯಭಾರ ಕಚೇರಿ ಸಂಪರ್ಕಿಸಲು ತಮ್ಮ ಸಹೋದರ ಮಲ್ಲಿಕಾರ್ಜುನ ಪ್ರಯತ್ನಿಸಿದ್ದಾರೆ’ ಎಂದು ಮಹಾನಂದಿ ಹೇಳಿದರು.

ಪೋಷಕರಿಗೆ ಮಂಜುನಾಥ ಒಬ್ಬನೇ ಮಗ. ಇಬ್ಬರು ಅಕ್ಕಂದಿರು ಇದ್ದು, ಅವರಿಗೆ ಮದುವೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.