ADVERTISEMENT

ಜೆಡಿಎಸ್‌ ಅಧ್ಯಕ್ಷ ಕೃಷ್ಣಪ್ಪ ಹಠಾತ್‌ ನಿಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 20:08 IST
Last Updated 23 ಏಪ್ರಿಲ್ 2014, 20:08 IST

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ, ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ  ಎ.ಕೃಷ್ಣಪ್ಪ (69) ಅವರು ಬುಧವಾರ ರಾತ್ರಿ ಇಲ್ಲಿ ತೀವ್ರ ಹೃದಯಾ­ಘಾತದಿಂದ ನಿಧನರಾದರು.

ತಮ್ಮ ಕಾಲೇಜಿನ ಆವರಣದಲ್ಲಿ ಸಂಜೆ 6ರ ಸುಮಾರಿಗೆ ಬ್ಯಾಡ್ಮಿಂಟನ್‌ ಆಡು­ವಾಗ ಕುಸಿದುಬಿದ್ದ ಅವರನ್ನು ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅವರನ್ನು ಉಳಿಸಲು ವೈದ್ಯರು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ರಾತ್ರಿ 7.30ಕ್ಕೆ ಅವರು ಇಹಲೋಕ ತ್ಯಜಿಸಿದರು.

ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯ­ರಿದ್ದಾರೆ. ಪುತ್ರಿ ಪೂರ್ಣಿಮಾ ಅವರು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಸದಸ್ಯೆ.

1985ರಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು 8, 9, 11 ಹಾಗೂ 12ನೇ ವಿಧಾನಸಭೆಗೆ ವರ್ತೂರು ಕ್ಷೇತ್ರದಿಂದ  ಆಯ್ಕೆಯಾಗಿದ್ದರು. ಎಸ್‌.ಎಂ.ಕೃಷ್ಣ ಸಂಪುಟ­ದಲ್ಲಿ ಪಶುಸಂಗೋಪನೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುಂಚೆ ತೋಟಗಾರಿಕೆ, ಸಮಾಜ ಕಲ್ಯಾಣ, ಸಕ್ಕರೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ರಾಜಕೀಯ ಕ್ಷೇತ್ರ ಪ್ರವೇಶಕ್ಕೂ ಮುನ್ನ ಐಟಿಐನಲ್ಲಿ ಉದ್ಯೋಗಿಯಾಗಿದ್ದರು. ಐಟಿಐ ಕಾರ್ಮಿಕರ ಸಂಘದ ಸಹ ಕಾರ್ಯದರ್ಶಿಯಾಗಿದ್ದಾಗ ಹೋರಾಟಗಳಲ್ಲಿ ಭಾಗವಹಿ­ಸುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಕ್ಕೆ ವೇದಿಕೆ ಸಿದ್ಧಮಾಡಿಕೊಂಡರು. 2013ರ ವಿಧಾನಸಭಾ ಚುನಾವಣೆ­ಯಲ್ಲಿ ಕೆ.ಆರ್.ಪುರಂ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌  ಟಿಕೆಟ್‌ ನಿರಾಕರಿಸಿತು. ಹೀಗಾಗಿ ಕೊನೆಗಳಿಗೆಯಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದರು.

ಹಿರಿಯೂರು ವಿಧಾನ­ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅವರು ಸೋತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅವರನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ವೃತ್ತಿಯಿಂದ ಸಮಾಜ ಸೇವ­ಕರಾದ ಅವರು ಕೆ.ಆರ್‌.­ಪುರಂನಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಗುರುವಾರ ಸಾಯಂಕಾಲ ಅಂತ್ಯಕ್ರಿಯೆ ನಡೆಯಲಿದೆ.

ದೇವೇಗೌಡ ಭೇಟಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ಅಂತಿಮ ದರ್ಶನ ಪಡೆದರು.

ಎಚ್‌ಡಿಕೆ ವಾಪಸ್‌: ವಿಶ್ರಾಂತಿ ಸಲುವಾಗಿ ಸಿಂಗಪುರಕ್ಕೆ ತೆರಳಿ­ರುವ ಜೆಡಿಎಸ್‌ ನಾಯಕ ಎಚ್‌.ಡಿ.­ಕುಮಾರಸ್ವಾಮಿ ಅವರು ಕೃಷ್ಣಪ್ಪ ನಿಧನದ ಕಾರಣದಿಂದ ತಮ್ಮ ಪ್ರವಾಸ ಮೊಟಕುಗೊಳಿಸಿ ನಗರಕ್ಕೆ ವಾಪಸಾಗಲಿದ್ದಾರೆ.

ಗೆದ್ದರಷ್ಟೆ ಉಪ ಚುನಾವಣೆ
ತುಮಕೂರು ಲೋಕಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣಾಧಿಕಾರಿ ಶಿಫಾರಸು ಮಾಡಿದ್ದಾರೆ.  ಚುನಾವಣಾ ಆಯೋಗ ಅದಕ್ಕೆ ಒಪ್ಪಿಗೆ ನೀಡಿದರೆ ಅಲ್ಲಿ ಮರು ಮತದಾನ ನಡೆಯಲಿದೆ. ಕಣದಲ್ಲಿರುವ ಜೆಡಿಎಸ್‌ ಅಭ್ಯರ್ಥಿ ಎ.ಕೃಷ್ಣಪ್ಪ ನಿಧನರಾಗಿದ್ದರೂ, ಅವರು ಗೆದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.