ADVERTISEMENT

ತಟಸ್ಥ ಅಂತರ್ಜಾಲಕ್ಕೆ ಜಯ

ಬೆಲೆ ವ್ಯತ್ಯಾಸದ ದತ್ತಾಂಶ ಸೇವೆಗೆ ‘ಟ್ರಾಯ್‌’ ನಿಷೇಧ: ಫೇಸ್‌ಬುಕ್‌ಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ತಟಸ್ಥ ಅಂತರ್ಜಾಲಕ್ಕೆ ಜಯ
ತಟಸ್ಥ ಅಂತರ್ಜಾಲಕ್ಕೆ ಜಯ   

ನವದೆಹಲಿ (ಪಿಟಿಐ): ತೀವ್ರ ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದ, ಬೆಲೆ ವ್ಯತ್ಯಾಸದ ಇಂಟರ್‌ನೆಟ್‌ ದತ್ತಾಂಶ ಸೇವೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌), ಸೋಮವಾರ ಸಂಪೂರ್ಣವಾಗಿ ನಿಷೇಧಿಸಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

‘ದೇಶದಲ್ಲಿನ ಅಸಂಖ್ಯಾತ ಇಂಟರ್‌ನೆಟ್‌ ಬಳಕೆದಾರರು ಮತ್ತು ಮಾಹಿತಿ ಪೂರೈಸುವವರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸೇವಾ ಸಂಸ್ಥೆಗಳ ಇಂಟರ್‌ನೆಟ್‌ ಸೌಲಭ್ಯವು ಮುಕ್ತ ಮತ್ತು ತಾರತಮ್ಯರಹಿತವಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ,  ಪಕ್ಷಪಾತದಿಂದ ಕೂಡಿದ ದತ್ತಾಂಶ ಸೇವೆಗಳನ್ನು ನಿಷೇಧಿಸುವುದು ಸೂಕ್ತ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಟ್ರಾಯ್‌ ಹೇಳಿದೆ.

ಈ ನಿರ್ಬಂಧವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಹೊಸ ನಿರ್ಬಂಧ ಕ್ರಮಗಳ ಬಗ್ಗೆ ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಎರಡು ವರ್ಷಗಳ ನಂತರ ‘ಟ್ರಾಯ್‌’ ತನ್ನ ಈ ನಿರ್ಧಾರ ಪರಾಮರ್ಶಿಸಲಿದೆ.

ಇದರಿಂದ ‘ತಟಸ್ಥ ಅಂತರ್ಜಾಲ’ ನೀತಿಗೆ ಭಾರಿ ಗೆಲುವು ಸಿಕ್ಕಿದ್ದು,  ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್‌ಬುಕ್‌ನ ‘ಫ್ರೀ ಬೇಸಿಕ್ಸ್‌’, ಭಾರ್ತಿ ಏರ್‌ಟೆಲ್‌ನ ‘ಝೀರೊ  ಪ್ಲ್ಯಾನ್‌’ ಸೇರಿದಂತೆ ಬೆಲೆ ವ್ಯತ್ಯಾಸದ ದತ್ತಾಂಶ ಸೇವೆ ನೀಡಲು ಮುಂದಾಗಿದ್ದ ದೂರಸಂಪರ್ಕ ಸೇವಾಸಂಸ್ಥೆಗಳಿಗೆ ತೀವ್ರ ಹಿನ್ನಡೆಯಾಗಿದೆ.  ಎಲ್ಲ ಪ್ರಮುಖ ಸೇವಾ ಸಂಸ್ಥೆಗಳು ಬೆಲೆ ವ್ಯತ್ಯಾಸದ ದತ್ತಾಂಶ ಸೇವೆಗೆ ಒಲವು ವ್ಯಕ್ತಪಡಿಸಿದ್ದವು.

ಸಾಫ್ಟ್‌ವೇರ್‌ ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ)  ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ, ಸಾಮಾಜಿಕ ಕಾರ್ಯಕರ್ತರಿಂದ ‘ಫ್ರೀ ಬೇಸಿಕ್ಸ್‌’ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

₹ 50 ಸಾವಿರ ದಂಡ: ಈ ನಿಷೇಧ ಉಲ್ಲಂಘಿಸುವ ದೂರಸಂಪರ್ಕ ಸೇವಾ ಸಂಸ್ಥೆಗಳಿಗೆ ಪ್ರತಿ ದಿನ ₹ 50 ಸಾವಿರದಿಂದ ₹ 50 ಲಕ್ಷದತನಕ ದಂಡ ವಿಧಿಸಲಾಗುವುದು ಎಂದೂ ಎಚ್ಚರಿಸಿದೆ.

‘ಯಾವುದೇ ದೂರಸಂಪರ್ಕ ಸೇವಾ ಸಂಸ್ಥೆಯು, ಮಾಹಿತಿ ಆಧಾರದ ಮೇಲೆ ವಿಭಿನ್ನ ಶುಲ್ಕದ ಕೊಡುಗೆ ಅಥವಾ  ಶುಲ್ಕ ವಿಧಿಸುವಂತಿಲ್ಲ’ ಎಂದು ‘ಟ್ರಾಯ್‌’ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು. 

ತುರ್ತು ಸೇವೆಗಳನ್ನು ಒದಗಿಸುವುದಕ್ಕೆ ಮಾತ್ರ  ದರಗಳನ್ನು ತಗ್ಗಿಸಬಹುದು ಎಂದು ಹೇಳಿರುವ ‘ಟ್ರಾಯ್‌’, ತುರ್ತು ಸೇವೆಗಳನ್ನು  ಮಾತ್ರ ತಕ್ಷಣಕ್ಕೆ
ವ್ಯಾಖ್ಯಾನಿಸಿಲ್ಲ. 

ಅಂತಹ ಸೇವೆಗಳ ಬಗ್ಗೆ ದೂರಸಂಪರ್ಕ ಸೇವಾ ಸಂಸ್ಥೆಗಳು ‘ಟ್ರಾಯ್‌’ ಗಮನಕ್ಕೆ ತರಬೇಕು  ಎಂದು ಶರ್ಮಾ ಹೇಳಿದ್ದಾರೆ.

ಫೇಸ್‌ಬುಕ್‌ಗೆ ನಿರಾಸೆ
ಬೆಲೆ ವ್ಯತ್ಯಾಸದ ದತ್ತಾಂಶ ಸೇವೆ ನಿಷೇಧಿಸಿದ ‘ಟ್ರಾಯ್‌’ನ ನಿರ್ಧಾರಕ್ಕೆ ಫೇಸ್‌ಬುಕ್‌ ತನ್ನ ತೀವ್ರ ನಿರಾಸೆ ವ್ಯಕ್ತಪಡಿಸಿದೆ.

‘ಫ್ರೀ ಬೇಸಿಕ್‌ ಮೂಲಕ ಹೆಚ್ಚೆಚ್ಚು ಜನರನ್ನು ಉಚಿತ ಮತ್ತು ಮುಕ್ತವಾದ ಆನ್‌ಲೈನ್‌ಗೆ ಕರೆತರುವುದು ನಮ್ಮ ಗುರಿಯಾಗಿತ್ತು. ‘ಟ್ರಾಯ್‌’ ನಿರ್ಧಾರ ನಮಗೆ ನಿರಾಶೆ ಮೂಡಿಸಿದ್ದರೂ, ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನ ಮುಂದುವರೆಸುತ್ತೇವೆ. ಅಂತರ್ಜಾಲ ಸೇವೆಯಿಂದ ವಂಚಿತರಾದವರಿಗೆ ಸುಲಭ ಮಾರ್ಗ ಒದಗಿಸಲಾಗುವುದು’ ಎಂದು ಸಂಸ್ಥೆಯ ವಕ್ತಾರ ಹೇಳಿದ್ದಾರೆ.

ಟ್ರಾಯ್‌ ಆದೇಶದ ಪರಿಣಾಮ
* ತಕ್ಷಣದಿಂದಲೇ ಜಾರಿ, ಗೆಜೆಟ್‌ ಅಧಿಸೂಚನೆ ಪ್ರಕಟ
* ಗ್ರಾಹಕ ಬಳಸುವ  ಅಂತರ್ಜಾಲಾಧಾರಿತ ಸೇವೆ , ಆತ ವೀಕ್ಷಿಸುವ ಜಾಲತಾಣಗಳನ್ನು ಆಧಾರವಾಗಿಟ್ಟುಕೊಂಡು ಇಂಟರ್‌ನೆಟ್ ಬಳಕೆ ಶುಲ್ಕವನ್ನು ವಿಧಿಸುವಂತಿಲ್ಲ.
* ‘ಫ್ರೀ ಬೇಸಿಕ್ಸ್' ಯೋಜನೆಯಡಿಯಲ್ಲಿ ಬರುವ ತಾಣಗಳನ್ನು ಬಳಸುವವರಿಗೆ ಉಚಿತ ಇಂಟರ್‌ನೆಟ್‌ ನೀಡುವ ಫೇಸ್‌ಬುಕ್ ಯೋಜನೆಗೆ ಹಿನ್ನೆಡೆ.
* ಈ ನಿಯಮಗಳನ್ನು ಉಲ್ಲಂಘಿಸುವ ಇಂಟರ್‌ನೆಟ್‌ ಸೇವಾದಾತರಿಗೆ ₹50 ಸಾವಿರದಿಂದ ₹ 50 ಲಕ್ಷದ ತನಕ ದಂಡ.
* ಎರಡು ವರ್ಷಗಳ ನಂತರ ಈ ನಿಯಮಗಳ ಪುನರ್ ಪರಿಶೀಲನೆ.
* ತುರ್ತು ಸಂದರ್ಭಗಳಲ್ಲಿ ನಿರ್ದಿಷ್ಟ ಸೇವೆಗಳನ್ನು ಶುಲ್ಕರಹಿತವಾಗಿ ನೀಡುವುದಕ್ಕೆ ಯಾವುದೇ ಅಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT