ADVERTISEMENT

ತುಂಗಾ ನಾಲೆ: ಲೋಕಾಯುಕ್ತಕ್ಕೆ ಈಶ್ವರಪ್ಪ ದೂರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2015, 19:51 IST
Last Updated 28 ಡಿಸೆಂಬರ್ 2015, 19:51 IST

ಬೆಂಗಳೂರು: ‘ಶಿವಮೊಗ್ಗದ ತುಂಗಾ ನಾಲೆ ಆಧುನೀಕರಣ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ವಿರೋಧಪಕ್ಷದ ನಾಯಕ  ಕೆ.ಎಸ್‌. ಈಶ್ವರಪ್ಪ ಸೋಮವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಆಧುನೀಕರಣ ಕಾಮಗಾರಿಯನ್ನು ನೀರಾವರಿ ನಿಗಮವು ಕೈಗೆತ್ತಿಕೊಂಡಿದ್ದು, ಅಂದಾಜು ₹127.30 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿದೆ. ಇಷ್ಟು ಭಾರೀ ಮೊತ್ತದ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯ ಪ್ರಕಾರ ದೀರ್ಘಾವಧಿ ಟೆಂಡರ್‌ ಕರೆಯಬೇಕು. ಆದರೆ, ಇಲ್ಲಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವರದಿಗೆ ಸೂಚನೆ: ದೂರು ಸ್ವೀಕರಿಸಿದ ಲೋಕಾಯುಕ್ತ ಹಂಗಾಮಿ ರಿಜಿಸ್ಟ್ರಾರ್‌ ಎಂ.ಎಸ್‌. ಬಾಲಕೃಷ್ಣ ಅವರು, ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ಕರೆ ಮಾಡಿ, ‘ಸ್ಥಳ ಪರಿಶೀಲನೆ ನಡೆಸಿ ತಕ್ಷಣ ವರದಿ ನೀಡುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

4 ತಾಸು ಕಾದರು: ದೂರು ನೀಡಲು ಬೆಳಿಗ್ಗೆ 12 ಗಂಟೆಗೆ ಇಲ್ಲಿನ ಎಂ.ಎಸ್‌. ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಗೆ ಬಂದ ಕೆ.ಎಸ್. ಈಶ್ವರಪ್ಪ ಸಂಜೆ 4ರ ವರೆಗೆ ಕಾಯಬೇಕಾಯಿತು.

‘ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪರಿಶೀಲನೆ ನಡೆಸಿದ ನಂತರ ಹಂಗಾಮಿ ರಿಜಿಸ್ಟ್ರಾರ್‌ ದೂರು ಸ್ವೀಕರಿಸಿದ್ದಾರೆ’ ಎಂದು  ಈಶ್ವರಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.